ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಿಕೊಡುವ ಕುರಿತು ಕೆಎಸ್ಸೆಆರ್ಟಿಸಿ ಬಸ್ ಡಿಪೋ ಕುಮಟಾ ಘಟಕದ ಡಿಪೋ ವ್ಯವಸ್ಥಾಪಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಚಿತ್ರಿಗಿ ಪ್ರೌಢಶಾಲೆಗೆ ಅಘನಾಶಿನಿ, ಬಾಡ ಬಸ್‍ನಿಂದ 70 ವಿದ್ಯಾರ್ಥಿಗಳು ಮತ್ತು ಲುಕ್ಕೇರಿ-ಮಾಸೂರು 57 ವಿದ್ಯಾರ್ಥಿಗಳು ಒಟ್ಟೂ 127 ವಿದ್ಯಾರ್ಥಿಗಳು ಸರಕಾರಿ ರಿಯಾಯತಿ ದರದ ವಿದ್ಯಾರ್ಥಿ ಬಸ್ ಪಾಸ್ ಪಡೆದಿದ್ದಾರೆ. ಪ್ರಸ್ತುತ ಸರಕಾರಿ ಕಾಲೇಜು ಬಿಡುವ ಸಮಯವು ಶಾಲೆಯ ಬಿಡುವಿನ ಸಮಯವೂ ಒಂದೇ ಆಗಿರುವುದರಿಂದ ಬಸ್ ತುಂಬಿ ಬರುತ್ತಿದ್ದು ವಿದ್ಯಾರ್ಥಿಗಳಿಗೆ ಸ್ಥಳಾಭಾವ ಉಂಟಾಗಿದೆ. ಈ ಕಾರಣ ಹೆಣ್ಣುಮಕ್ಕಳನ್ನೂ ಸಹ ಮಾರ್ಗ ಮಧ್ಯೆ ಬಿಟ್ಟು ಹೋಗುತ್ತಿದ್ದಾರೆಂದು ಅಲ್ಲದೇ ಮಾಸೂರಿಗೆ ಹೋಗುವ ಬಸ್ ಈ ಸಮಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ದೊಡ್ಡ ಸಂಕಟ ಅನುಭವಿಸುತ್ತಿದ್ದಾರೆಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ವಿದ್ಯಾರ್ಥಿ ಸಮುದಾಯದ ಪರವಾಗಿ ಅಳಲು ತೋಡಿಕೊಂಡರು.
ಪಾಲಕರ ಪರವಾಗಿ ಮಾತನಾಡಿದ ಶಿವಾನಂದ ಕಾಮತ ಶಾಲೆಗೆ ಸಮೀಪವಾದ ಸಸ್ಯೋಧ್ಯಾನ ಬಸ್ ನಿಲ್ದಾಣದಲ್ಲಿಯೇ ಬಸ್ ಸ್ಟಾಪ್ ಕೊಡಬೇಕು. ಅಲ್ಲಿಂದಲೇ ಹತ್ತಿಸಿ, ಅಲ್ಲಿಯೇ ಇಳಿಸುವಂತೆ ನಿರ್ವಾಹಕರಿಗೆ ಸೂಚಿಸಬೇಕು ಎಂದು ವಿನಂತಿಸಿದ್ದಲ್ಲದೇ ಕೆಲವೇ ಕೆಲವು ಬಸ್ ನಿರ್ವಾಹಕರು, ವಿದ್ಯಾರ್ಥಿ ಪ್ರಯಾಣಿಕರೊಡನೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ಪ್ರಾಸ್ತಾಪಿಸಿ ಗಮನ ಸೆಳೆದರು. ಅತ್ಯಂತ ಸೌಜನ್ಯದಿಂದ ಉತ್ತರಿಸಿದ ಡಿಪೋ ವ್ಯವಸ್ಥಾಪಕಿ ಸೌಮ್ಯಾ ಬಿ. ನಾಯಕ, ಹೊನ್ನಾವರ ಮತ್ತು ಕುಮಟಾ ಎರಡೂ ಬಸ್ ಡಿಪೋ ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದ್ದು, ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಅದಕ್ಕನುಗುಣವಾಗಿ ಸಾಕಷ್ಟು ಸಂಖ್ಯೆಯಲ್ಲಿ ಬಸ್, ಕಂಡಕ್ಟರ್ಸ್ ಮತ್ತು ಡ್ರೈವರ್ಸ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಈ ಸಮಸ್ಯೆ ತಾಲೂಕಿನಾದ್ಯಂತ ತಲೆದೋರಿದೆ ಎಂದರು.
ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಕಾಳಜಿ ತಮ್ಮ ಮೇಲಿದ್ದು ಅದರಿಂದ ನುಣುಚಿ ಕೊಳ್ಳಲಾಗದೆಂದು ಅಭಿಪ್ರಾಯ ಪಟ್ಟರಲ್ಲದೇ ಕೊನೆಯ ಬಸ್ ಅದಾಗಿದ್ದರೆ ಯಾರನ್ನೂ ಬಿಟ್ಟು ಹೋಗದಂತೆ ಸೂಚಿಸುವುದಾಗಿ ತಿಳಿಸಿದರು. ಶಾಲೆಗೆ ಸಮೀಪದ ಸಸ್ಯೋಧ್ಯಾನ ಬಸ್ ನಿಲುಗಡೆಗೆ ಸೂಚಿಸುವುದಾಗಿಯೂ, ಅನುಚಿತ ವರ್ತನೆ ತೋರುವ ಬಸ್ ಸಂಖ್ಯೆ ತಿಳಿಸಿದರೆ ಕೂಡಲೇ ಅಂತಹ ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಎಟಿಎಸ್ ಶಿವಾನಂದ ನಾಯ್ಕ ಕೂಡ ವ್ಯವಸ್ಥೆ ಸರಿದೂಗಿಸಲು ಸಹಕರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಪ್ರದೀಪ ನಾಯಕ, ಕಿರಣ ಪ್ರಭು ಇತರರಿದ್ದರು.