ಭಟ್ಕಳ: ತಾಲೂಕಿನಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಿದ್ದು ಇದು ವಾಹನ ಸವಾರರಿಗೂ ಕಂಟಕವಾಗಿ ಪರಿಣಮಿಸುತ್ತಿದೆ.
ಕಾಡು ಹಂದಿ ಸಾಗರ ರಸ್ತೆಯ ಮಾರ್ಗವಾಗಿ ಮಾರುಕೇರಿ, ಹಾಡುವಳ್ಳಿ ಮತ್ತಿತರ ಗ್ರಾಮೀಣ ಭಾಗಕ್ಕೆ ಹೋಗುವ ಬೈಕ್ ಸವಾರರಿಗೆ ಪ್ರಾಣಸಂಕಟವಾಗಿ ಮಾರ್ಪಟ್ಟಿದ್ದು ಕೂಡಲೇ ಪುರಸಭೆಯವರು ಕ್ರಮಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೇ ಬಿಡಾಡಿ ದನಕರುಗಳು, ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈಗ ಈ ವ್ಯಾಪ್ತಿಗೆ ಕಾಡು ಹಂದಿಯೂ ಸೇರಿದ್ದು 20ಕ್ಕೂ ಅಧಿಕ ಕಾಡುಹಂದಿಗಳು ರಸ್ತೆಗಿಳಿದು ಸಾರ್ವಜನಿಕರು ಹಾಗೂ ವಾಹನ ಸವಾರರು ಆತಂಕಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎನ್ನುತ್ತಾರೆ ಸಾರ್ವಜನಿಕರು.
ಕಾಡು ಹಂದಿಯಿಂದ ಅಪಘಾತಗಳ ಸಂಖ್ಯೆ ಹೆಚ್ಚಬಹುದೆಂಬ ಬಗ್ಗೆಯೂ ಜನತೆ ಆತಂಕ ವ್ಯಕ್ತ ಪಡಿಸಿದ್ದಾರೆ.