ಬೆಂಗಳೂರು: ದೇಶದ ಭಾರತತ್ವವನ್ನು ಉಳಿಸುವ ಸಲುವಾಗಿ ಆಚಾರ್ಯ ವಿಷ್ಣುಗುಪ್ತ ಚಾಣಕ್ಯನ ಹೆಸರಿನಲ್ಲಿ ಜಗತ್ತಿನ ಏಕೈಕ ವಿಶ್ವವಿದ್ಯಾಪೀಠ ಆರಂಭಿಸಲಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ರಾಮಾಯಣ ಚಾತುರ್ಮಾಸ್ಯ ವ್ರತ ಆರಂಭದ ದಿನವಾದ ಗುರುಪೂರ್ಣಿಮೆಯಂದು ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಪರಮಶ್ರೇಷ್ಠ ಗುರುವಿಗೆ, ಸ್ವಾರ್ಥರಹಿತ ಜೀವನಕ್ಕೆ ಚಾಣಕ್ಯ ಉದಾಹರಣೆ. ಚಂದ್ರಗುಪ್ತನಂಥ ಧರ್ಮನಿಷ್ಠ, ಸಂಸ್ಕøತಿನಿಷ್ಠ ಧರ್ಮಯೋಧರನ್ನು ಸಿದ್ಧಪಡಿಸುವುದು ಇದರ ಉದ್ದೇಶ ಎಂದು ಬಣ್ಣಿಸಿದರು.


ಭಾರತದ ಗತವೈಭವ ಮರುಕಳಿಸುವಂತೆ ಮಾಡುವ ಈ ವಿಶ್ವವಿದ್ಯಾಪೀಠ, ಚಲಿಸುವ ವಿಶ್ವವಿದ್ಯಾನಿಲಯವೇ ಆಗಿದ್ದ ಶಂಕರಾಚಾರ್ಯರ ಸ್ಮರಣೆಯಲ್ಲಿ, ಅವರಿಗೇ ಸಮರ್ಪಣೆಯಾಗುತ್ತಿದೆ ಎಂದು ವಿವರಿಸಿದರು.
ಈ ವಿಶಿಷ್ಟ ಪರಿಕಲ್ಪನೆ ಸಾಕಾರಗೊಳ್ಳಲು ಸಮಾಜದ ಕೊಡುಗೆ ಅಗತ್ಯ. ಭಾರತವನ್ನು ಬೆಳಗುವ ಜ್ಞಾನಬೆಳಕಿನ ಕಟ್ಟಿಗೆಯಾಗೋಣ; ಭವ್ಯ ಭಾರತ ಕಟ್ಟುವ ಇಟ್ಟಿಗೆಯಾಗೋಣ ಎಂದು ಕರೆ ನೀಡಿದರು. ಧರ್ಮಾಭಿಮಾನಿ, ದೇಶಾಭಿಮಾನಿ, ಸಂಸ್ಕøತಿ ಅಭಿಮಾನಿಗಳಿಗೆ ಈ ವಿಚಾರವನ್ನು ಪ್ರಸಾರ ಮಾಡಬೇಕಾದ ಅಗತ್ಯವಿದೆ ಎಂದರು.
ಗುರು ಸಂಪರ್ಕಕ್ಕೆ ಸ್ಮರಣೆಯೇ ಮಾರ್ಗ. ಗುರು, ದೇವರಿಂದ ಹರಿದುಬರುವ ಜ್ಞಾನ ಪರಂಪರೆ ಹರಿಯಲು ಇದು ಸಾಧನವಾಗುತ್ತದೆ. ಗುರುಪೂರ್ಣಿಮೆ ಅಂಥ ಸ್ಮರಣೆಗೆ ಮಹಾಪರ್ವದಿನ. ಗುರುವಿಲ್ಲದ ಬದುಕು ನಿರರ್ಥಕ. ಸಕಾಲದಲ್ಲಿ ಸರಿ ನಿರ್ಣಯ ಕೈಗೊಳ್ಳಲು ಗುರುಕೃಪೆ ಅಗತ್ಯ. ಶಿಷ್ಯಕೋಟಿಗೆ ಮಾರ್ಗದರ್ಶನ ನೀಡುವುದು ಗುರು ಪರಂಪರೆ ಎಂದು ಬಣ್ಣಿಸಿದರು.
ಚಾತುರ್ಮಾಸ್ಯವೇ ಸನ್ಯಾಸಿಗಳ ಆಯಸ್ಸು; ಪ್ರತಿ ಚಾತುರ್ಮಾಸ್ಯದಿಂದ ಪುಣ್ಯಸಂಚಯವಾಗುತ್ತದೆ. ಗುರುಶಿಷ್ಯ ಬಂಧದ ವಿಶೇಷ ಪರ್ವ ಎಂದರು. ಇಡೀ ಚಾತುರ್ಮಾಸ್ಯದಲ್ಲಿ ಸುವರ್ಣಮಂಟಪದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲುತ್ತಿದ್ದು, ಇದು ಶ್ರೀಮಠದ ಇತಿಹಾಸದಲ್ಲೇ ಮೊದಲು. ಇದು ಸುವರ್ಣಯುಗದ ಪ್ರಾರಂಭದ ಸಂಕೇತ. ಸ್ವರ್ಣಮಂಟಪದ ಕಾಂತಿ ಎಲ್ಲರ ಬದುಕನ್ನು ಸ್ವರ್ಣಮಯ ಮಾಡಬಲ್ಲದು ಎಂದು ಹೇಳಿದರು.

RELATED ARTICLES  ಭಾರತೀಯ ಸಂಸ್ಕøತಿ ಪರಂಪರೆಯ ವರ್ಧಂತಿಗೆ ಶ್ರಮಿಸೋಣ: ರಾಘವೇಶ್ವರಶ್ರೀ


ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಮಠದ ನೂತನ ಶಾಸನತಂತ್ರವನ್ನು ಘೋಷಿಸಲಾಯಿತು. ಗುರುಗಳ ಸಂಕಲ್ಪಶಕ್ತಿಯನ್ನು ಸಾಕಾರಗೊಳಿಸುವ ಕ್ರಿಯಾಶಕ್ತಿಯೇ ಶಾಸನತಂತ್ರ ಎಂದು ಬಣ್ಣಿಸಿದರು. ಶ್ರೀಮಠದ ಕಾರ್ಯಕರ್ತರ ಶ್ರಮ, ತ್ಯಾಗದ ಫಲವಾದ ಪುನರ್ವಸು ಭವನವನ್ನೂ ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಸುಮಾರು 12 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ವಿವಿಧೋದ್ದೇಶ ಭವನ ನಿರ್ಮಿಸಲಾಗಿದೆ.


ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವೇದಮೂರ್ತಿ ಮಾತನಾಡಿ, ಧರ್ಮದ ಜತೆಗೆ ಸಮಾಜದ ಅಭಿವೃದ್ಧಿಗೆ, ಸಂಸ್ಕøತಿ, ಸಾಮಾಜಿಕ ಮೌಲ್ಯಗಳ ಉನ್ನತಿಗೆ ಶ್ರಮಿಸುತ್ತಿರುವ ಶ್ರೀಮಠಕ್ಕೆ ಹಾಗೂ ಶ್ರೀಗಳಿಗೆ ಸಮಾಜ ಋಣಿಯಾಗಿರಬೇಕು ಎಂದು ಹೇಳಿದರು.
ಭ್ರಷ್ಟಾಚಾರದಿಂದಾಗಿ ಮೇಧಾವಿಗಳಿಗೆ, ದುರ್ಬಲ ವರ್ಗದಿಂದ ಬಂದವರಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಇಂಥದ್ದನ್ನು ತಪ್ಪಿಸಲು ಶ್ರೀಮಠದ ವತಿಯಿಂದ ವೈದ್ಯಕೀಯ ಹಾಗೂ ವೃತ್ತಿಪರ ಕಾಲೇಜುಗಳನ್ನು ಆರಂಭಿಸಿದರೆ ಸಮಾಜಕ್ಕೆ ಒಳಿತಾಗುತ್ತದೆ. ನಾಗರಿಕ ಸೇವೆಗೆ ವಿಶೇಷವಾದ ತರಬೇತಿ ಕೇಂದ್ರ ಆರಂಭಿಸಬೇಕು ಎಂದು ಮನವಿ ಮಾಡಿದರು. ನೂತನವಾಗಿ ಲೋಕಾರ್ಪಣೆಯಾದ ಪುನರ್ವಸು ಭವನ ಜ್ಞಾನವಿಕಾಸದ ಕೇಂದ್ರವಾಗಲಿ ಎಂದು ಆಶಿಸಿದದರು. ನದಿಜೋಡಣೆ ಮತ್ತು ಸಮಾನ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಸಲಹೆ ಮಾಡಿದರು.

RELATED ARTICLES  ನಿನ್ನೆ ಸಮಾಧಾನ ನೀಡಿ, ಇಂದು ಮತ್ತೆ ಏರಿದ ಕೊರೋನಾ


ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಳ್, ಸಿಇಓ ಕೆ.ಜಿ.ಭಟ್, ಹವ್ಯಕ ಮಹಾಮಂಡಲದ ನೂತನ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಮಾತೃವಿಭಾಗದ ಶ್ರೀಸಂಯೋಜಕಿ ಈಶ್ವರಿ ಬೇರ್ಕಡವು, ಡಾ.ವೈ.ವಿ.ಕೃಷ್ಣಮೂರ್ತಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಕೋರಮಂಗಲ, ಕಾರ್ಯದರ್ಶಿ ವಾದಿರಾಜ ಸಾಮಗ, ಧಾರಾರಾಮಾಯಣ ಕ್ರಿಯಾಸಮಿತಿಯ ಡಾ.ಶಾರದಾ ಜಯಗೋವಿಂದ್ ಮತ್ತಿತರರು ಉಪಸ್ಥಿತರಿದ್ದರು. ಗೋಫಲ ಟ್ರಸ್ಟ್‍ನ ಗೋಜ್ವಾಲವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.
ಇದಕ್ಕೂ ಮುನ್ನ ಮುಂಜಾನೆಯಿಂದ ಚಾತುರ್ಮಾಸ್ಯ ಅಂಗವಾಗಿ ಶ್ರೀಕರಾರ್ಚಿತ ಪೂಜೆ, ಶ್ರೀವ್ಯಾಸಪೂಜೆ ನಡೆಯಿತು. ಗುರುಪರಂಪರಾ ಪೂಜೆ ನೆರವೇರಿಸಿದ ಶ್ರೀಗಳು ಸಮಾಜದ ಸರ್ವರಿಗೆ ವ್ಯಾಸಮಂತ್ರಾಕ್ಷತೆ ಅನುಗ್ರಹಿಸಿದರು.