ಭಟ್ಕಳದ ಮೊದಲ ಹೆಸರು ವೃತ್ತಪುರ, ಚೆನ್ನಪಟ್ಟಣ ಎಂದಿತ್ತು. ಒಂದು ಕಡೆ ಕಡಲು, ಇನ್ನೊಂದೆಡೆ ಸಹ್ಯಾದ್ರಿ ಸಾಲು, ನಡುವೆ ಹರಿವ ಸುರಭಿ, ಚೌಥನಿ ತೊರೆಗಳು, ತೆಂಗಿನ ಮರಗಳ ಚೆಪ್ಪರದಲ್ಲಿ ಅಡಗಿ ಕುಳಿತಿದೆ ಭಟ್ಕಳ. ಅದು ೯ ನೇ ಶತಮಾನ. ಜೈನ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಾವಧಿ. ಕಡಲಿಂದ ೧೮ ಕಿಲೋ ಮೀಟರ್ ದೂರದಲ್ಲಿ ಹಾಡುವಳ್ಳಿ ಎಂಬ ನ
ಗರ. ಸಂಗೀತಪುರ ಅದರ ಇನ್ನೊಂದು ಹೆಸರು. ವಿಜಯನಗರ ಅರಸರ ಸಾಮಂತ ರಾಜರಾದ ಗೇರುಸೊಪ್ಪೆಯಿಂದ ಸಾಳ್ವರು ರಾಜ್ಯಾಭಾರ ಮಾಡುತ್ತಿದ್ದರು. ಹೊನ್ನಾವರದಿಂದ ಬೈಂದೂರಿನತನಕ ಸಾಳ್ವರ ರಾಜ್ಯ ವಿಸ್ತಾರ. ಅದಿರಲಿ, ೯ ನೇ ಶತಮಾನದಲ್ಲಿ ಹಾಡುವಳ್ಳಿಯಲ್ಲಿದ್ದ ಜೈನ ಯತಿ ಭಟ್ಟಾಕಳಂಕ ಶಬ್ದಾನುಶಾಸನ ಬರೆದ ವೈಯ್ಯಾಕರಣಿಯೂ ಹೌದು. ಒಮ್ಮೆ ವೃತ್ತಪುರದಲ್ಲಿ ದೊಡ್ಡ ಕುಳಿಯೊಂದು ಬಿತ್ತು. ಅದು ವಿಸ್ತಾರವಾಗುತ್ತಾ ಹೊಯಿತಂತೆ. ಆಗ ಯತಿ ಭಟ್ಟಾಕಳಂಕನ ಬಳಿ ತೆರಳಿದ ಜನ ವೃತ್ತಪುರದ ಕುಳಿಯ ಬಗ್ಗೆ ವಿವರಿಸಿದರು. ಸಮಸ್ಯೆ ಆಲಿಸಿದ ಭಟ್ಟಾಕಳಂಕ ತೀರ್ಥಂಕರರಲ್ಲಿ ಪ್ರಾರ್ಥಿಸಿ ಸಮಸ್ಯೆ ನಿವಾರಿಸಿದನಂತೆ. ಆಗ ಯತಿಯ ಮೇಲಿನ ಪ್ರೇಮ, ಭಕ್ತಿಯಿಂದ ಜನ ತಮ್ಮ ವೃತ್ತಪುರಕ್ಕೆ ಭಟಕಳ ಎಂದು ನಾಮಕರಣ ಮಾಡಿದರಂತೆ ಎಂಬ ಐತಿಹ್ಯ ಇದೆ. ೧೫೪೫ರಲ್ಲಿ ಡಚ್ಚರು ಭಟಿಕುಲ ಎಂದು ಭಟ್ಕಳದ ಹೆಸರನ್ನು ಪ್ರಸ್ತಾಪಿಸಿದ್ದಾರೆ. ೧೪೧೪ ರಿಂದ ಸಹ ಭಟಕಳ ಹೆಸರಿನ ಉಲ್ಲೇಖ ಸ್ಪಷ್ಟವಾಗಿದೆ.

೧೨೯೧ ರಿಂದ ಹೊಯ್ಸಳರ ಅರಸ ಮೂರನೇ ಬಲ್ಲಾಳ, ೧೪ ನೇ ಶತಮಾನದಲ್ಲಿ ಅಳುಪರು, ನಂತರ ಗೇರುಸೊಪ್ಪೆಯ ಸಾಳ್ವರು ಆಳಿದರು. ಆಗ ಭಟ್ಕಳ ಅವರ ಆಡಳಿತಕ್ಕೆ ಒಳಪಟ್ಟಿತ್ತು. ೧೫ ನೇ ಶತಮಾನದಲ್ಲಿ ಹೈವರಸರು ಆಡಳಿತ. ಆಗ ಭಟ್ಕಳ ವ್ಯಾಪಾರಿ ಕೇಂದ್ರ. ೧೫೫೦ ರಿಂದ ಚೆನ್ನಭೈರಾದೇವಿ ಆಡಳಿತ. ಈಕೆ ಮತ್ತು ಭಟ್ಕಳದ ಸಂಬಂಧ ಅವಿನಾಭಾವವಾದುದು. ಬೈಂದೂರಿನಿಂದ ಹೊನ್ನಾವರದ ವರೆಗೆ ಆಕೆಯ ರಾಜ್ಯ ವಿಸ್ತಾರವಾಗಿತ್ತು. ಬೀಳಿಗಿ ಅರಸ ನರಸಪ್ಪ ಒಡೆಯನ ಜೊತೆ ೧೫೭೩ರಲ್ಲಿ ಯುದ್ಧ ಮಾಡಿ ಗೆದ್ದಾಕೆ. ಪೋರ್ಚುಗೀರನ್ನು ಸಹ ಚೆನ್ನಾಭೈರಾದೇವಿ ವಿರೋಧಿಸಿದಳು. ಅವರು ೧೫೬೯ರಲ್ಲಿ ಭಟ್ಕಳದಲ್ಲಿ ಕಾರ್ಖಾನೆ ಸ್ಥಾಪನೆಗೆ ಮುಂದಾದಾಗ ಅದನ್ನು ವಿರೋಧಿಸಿ ಯುದ್ಧ ಸಾರಿದಳು. ಯುದ್ಧಕ್ಕೆ ಅದಿಲ್ ಶಾಹಿಗಳ ನೆರವು ಸಹ ಪಡೆದಳು. ಆದರೆ ಆಕೆಗೆ ಪೋರ್ಚುಗೀಸರ ವಿರುದ್ಧ ಯುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ತುರ್ಕಿಗಳ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ಪೋರ್ಚುಗೀಸರ ಶರತ್ತಿನೊಂದಿಗೆ ಆಕೆ ಒಪ್ಪಂದ ಮಾಡಿಕೊಂಡಳು ಎಂದು ಇತಿಹಾಸ ಹೇಳುತ್ತಿದೆ. ೧೬೦೬ರಲ್ಲಿ ಭಟ್ಕಳ ಸೇರಿದಂತೆ ಗೇರುಸೊಪ್ಪ ಪ್ರಾಂತ ಕೆಳದಿ ಅರಸರ ಕೈಗೆ. ಈ ಅವಧಿಯಲ್ಲಿ ೧೬೩೭ರಲ್ಲಿ ಬ್ರಿಟಿಷರು ಭಟ್ಕಳದಲ್ಲಿ ಕಾರ್ಖಾನೆ ಸ್ಥಾಪಿಸಿದರು ಎಂಬ ವಿವರ ಸಹ ಲಭ್ಯವಾಗುತ್ತದೆ. ಕ್ಯಾಪ್ಟನ್ ವೆಡಲ್ ಕಾರ್ಖಾನೆ ಸ್ಥಾಪಿಸಿದ.೧೬೭೦ರಲ್ಲಿ ಬ್ರಿಟಿಷರ ಈಸ್ಟ ಇಂಡಿಯಾ ಕಂಪನಿಯ ವಿರುದ್ಧ ಜನ ದಂಗೆ ಎದ್ದ ವರ್ಷ. ಬ್ರಿಟಿಷರ ನಾಯಿ ಆಕಳಿಗೆ ಕಚ್ಚಿ ಅದು ಮೃತಪಟ್ಟಿತು. ಜನ ಪ್ರಶ್ನಿಸಿದರು. ಆಗ ಕಾರ್ಖಾನೆಯ ಆಡಳಿತ ವರ್ಗದ ನಿರ್ಲಕ್ಷ್ಯದ ಉತ್ತರ ಬಂತು. ಆಗ ರೊಚ್ಚಿಗೆದ್ದ ಜನ ೧೮ ಜನ ಈಸ್ಟ ಇಂಡಿಯಾ ಕಂಪನಿಯ ಅಧಿಕಾರಿಗಳನ್ನ (ಬ್ರಿಟಿಷರನ್ನ) ಕೊಂದರು. ಆ ಅಧಿಕಾರಿಗಳ ಸಮಾಧಿ ಇಂದಿಗೂ ಭಟ್ಕಳದಲ್ಲಿ ಕಾಣ ಸಿಗುತ್ತವೆ. ಹಾಗಾಗಿ ಸ್ವಾತಂತ್ರ್ಯ ಪೂರ್ವದ ಆಕ್ರೋಶದ ಬೀಜಗಳು ೧೮೫೭ ರ ದಂಗೆ ಗಿಂತ ಮೊದಲೇ ಸಿಗುತ್ತವೆ ಎಂಬುದು ಸಹ ಇಲ್ಲಿ ಗಮನಾರ್ಹ.

ನೈಸರ್ಗಿಕ ಬಂದರು ಹೊಂದಿರುವ ಭಟ್ಕಳ ಬಂದರು ವಾಸ್ಕೋಡಿಗಾಮ(೧೫೦೨)ನನ್ನು ಸೆಳೆದಿತ್ತು. ಇಬ್ನಬಟೂಟ, ಬುಕನಿನ್ ಎಂಬ ಪ್ರವಾಸಿಗರನ್ನು ಸೆಳೆದಿತ್ತು. ಅರಬ್ (ತುರ್ಕಿ) ವ್ಯಾಪಾರಿಗಳನ್ನು , ಪೊರ್ಚಗೀಸರು, ಡಚ್ಚರು, ಬ್ರೀಟಿಷರನ್ನು ಸಹ ಭಟ್ಕಳದ ಸೌಂದರ್ಯ ಮತ್ತು ಇಲ್ಲಿನ ಸಂಬಾರು ಪದಾರ್ಥಗಳ ಆಗಾಧತೆಗೆ ಮಾರುಹೋದವರೇ.

ಕೆಳದಿ ಅರಸರ ನಂತರ ಭಟ್ಕಳ ಮೈಸೂರು ಅರಸರ(೧೭೬೩) ಹಿಡಿತಕ್ಕೆ, ನಂತರ ೧೭೯೯ರಲ್ಲಿ ಹೈದರಾಲಿ ಹಿಡಿತಕ್ಕೆ ಬಂತು. ಹೈದರಾಲಿಯ ಎರಡನೇ ಪತ್ನಿ ಭಟ್ಕಳದಾಕೆ. ಸುಲ್ತಾನ್ ಸ್ಟ್ರೀಟ್ ನಿರ್ಮಾಣ ಹೈದರಾಲಿ ಕಾಲದ್ದು, ಹೈದರಾಲಿ ನಿರ್ಮಿಸಿದ ಮಸೀದಿ ಈಗ ಪುನರುತ್ಥಾನ ಸಹ ಆಗಿದೆ. ೧೮೦೧ರಲ್ಲಿ ಭಟ್ಕಳದಲ್ಲಿ ೫೦ ಮನೆಗಳಿದ್ದವು ಎಂದು ಪ್ರವಾಸಿಗ ಚುಚನ್ (ಬುಕನಿನ್) ಉಲ್ಲೇಖಿಸಿದ್ದಾನೆ. ಇನ್ನು ಸೌದಿಯ ನವಾಯvರು ೭ ನೇ ಶತಮಾನದಲ್ಲಿ ಇರಾಕ್‌ಗೆ ವಲಸೆ ಹೋದರು. ಹಜಾಜ್ ಬಿನ್ ಯೂಸೂಫ್ ಎಂಬಾತ ಇರಾಕ್ ಗವರ್ನರ ಆಗಿದ್ದ. ಆ ಕಾಲದಲ್ಲಿ ಅವರು ಇರಾಕ್ ಮಾರ್ಗವಾಗಿ ಭಾರತದ ಪಶ್ಚಿಮ ಕರಾವಳಿಗೆ ಬಂದರು. ಹೊನ್ನಾವರದ ಹೊಸಪಟ್ಟಣ ಬಂದರಿಗೆ ಮೊದಲು ಬಂದ ನವಾಯತರು( ನೌಕಾಯಾನಾ ಪ್ರವೀಣರು ಆಗಿದ್ದ ನವಾಯತರು) ನಂತರ ಭಟ್ಕಳದ ಬಂದರನ್ನು ಆಯ್ಕೆಮಾಡಿಕೊಂಡರು. ನಂತರ ಭಟ್ಕಳದಲ್ಲಿ ನೆಲೆ ನಿಂತರು.

RELATED ARTICLES  "ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ" ಎನ್ನುತ್ತಲೇ ಲೀನವಾದೆಯಾ ಕವಿಯೇ...