ಕೊಚ್ಚಿ: ಬಿಹಾರ ಮತ್ತು ಅಸ್ಸಾಂ ಪ್ರವಾಹದಿಂದ ತತ್ತರಿಸುತ್ತಿದ್ದು ಇದೀಗ ಕೇರಳದಲ್ಲೂ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ಭಾರಿ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ.
ನೈಋತ್ಯ ಮಾನ್ಸೂನ್ ಮಳೆ ವ್ಯಾಪಕವಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪರಿಣಾಮ ಕೇರಳದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಪ್ರಮುಖವಾಗಿ ಕೇರಳದ ಇಡುಕ್ಕಿ, ಪಥನಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಡುಕ್ಕಿ, ಪಥನಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಜುಲೈ 18 ರಿಂದ ಮಳೆ ವ್ಯಾಪಕವಾಗಿದ್ದು, ಜುಲೈ 20ರವರೆಗೂ ಭಾರಿ ಮಳೆ ಮುಂದುವರೆಯಲಿದೆ. ಈ ಮೂರು ಜಿಲ್ಲೆಗಳು ಮಾತ್ರವಲ್ಲದೇ ಎರ್ನಾಕುಲಂ ನಲ್ಲೂ ಮಳೆಯ ಪ್ರಮಾಣ ಜೋರಾಗಿದ್ದು, ಇಲ್ಲೂ ಕೂಡ ರೆಡ್ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆ ಇದೆ .
ಇಲ್ಲಿನ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೀನುಗಾರರು ನದಿಗೆ ಮತ್ತು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.