ಬಂಟ್ವಾಳ: ಕಾರು ಮತ್ತು ಟ್ಯಾಂಕರ್ ನಡುವಿನ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟ ಭೀಕರ ಘಟನೆ ಬ್ರಹ್ಮರ ಕೂಟ್ಲು ಟೋಲ್ ಗೇಟ್ ಸಮೀಪ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಧರ್ಮಸ್ಥಳದಿಂದ ಹೆದ್ದಾರಿ ಮೂಲಕ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರಿಗೆ ಮಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ಬ್ರಹ್ಮರ ಕೂಟ್ಲು ಟೋಲ್ ಗೇಟ್ ಸಮೀಪದ ರಾಮಲ್ ಕಟ್ಟೆ ಬಳಿ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ವರದಿಯಾಗಿದೆ.
ಮೃತರೆಲ್ಲರು ಭಟ್ಕಳ ಮೂಲದವರೆಂದು ತಿಳಿದು ಬಂದಿದ್ದು, ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ತಿಳಿದು ಬಂದಿದೆ.
ಬಂಟ್ವಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.