ಕಳೆದ ಎರಡು ವಾರಗಳಿಂದ ಜಂಗಿ ಕುಸ್ತಿಗೆ ಕಾರಣವಾಗಿದ್ದ ವಿಧಾನ ಸಭೆಯಲ್ಲಿ ಕೊನೆಗೂ ಮಂಗಳವಾರ ಸಂಜೆ ವಿಶ್ವಾಸ ಮತ ಪರ ವಿರುದ್ಧ ನಡೆದ ಚರ್ಚೆ ಬಳಿಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಮ್ಮಿಶ್ರ ಸರಕಾರಕ್ಕೆ ಸೋಲಾಗಿದ್ದು ಕುಮಾರ ಸ್ವಾಮಿ ನೇತೃತ್ವದ ದೋಸ್ತಿ ಸರಕಾರ ಪತನಗೊಂಡಿದೆ.

ವಿಶ್ವಾಸ ಮತದಾನದ ಚರ್ಚೆಯ ಸಂದರ್ಭ ಒಂದು ಹಂತದಲ್ಲಿ ಸಿಎಂ ತಾನು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಆದರೆ ಕೊನೆಗೆ ತಾನು ಯಾವುದೇ ಕಾರಣಕ್ಕೂ ಪಲಾಯನ ಮಾಡುವುದಿಲ್ಲ. ಮತದಾನ ನಡೆಯಲಿ ಎಂದು ಘೋಷಿಸಿದರು.

ಬಳಿಕ ಸ್ಪೀಕರ್ ವಿಶ್ವಾಸ ಮತವನ್ನು ಡಿವಿಜನ್ ಮಾಡುವ ಘೋಷಣೆ ಮಾಡಿದರು. ತಲೆ ಎಣಿಕೆ ಮೂಲಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಂಖ್ಯಾ ಬಲದಲ್ಲಿ ಸೋತಿರುವ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕೃತವಾಗಿ ಪತನಗೊಂಡಿದೆ.

RELATED ARTICLES  ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಜೀವಂತ ಬದುಕಿದ್ದಾಗಲೇ 'ಭಾರತ ರತ್ನ' ನೀಡಿದ್ದರೆ, ಪ್ರಶಸ್ತಿ ಮೌಲ್ಯವೇ ಹೆಚ್ಚಾಗುತ್ತಿತ್ತು.

ಬಿಜೆಪಿ ಪರವಾಗಿ 105 ಹಾಗೂ ಸಮ್ಮಿಶ್ರ ಸರಕಾರ ಪರವಾಗಿ 100 ಶಾಸಕರು ಬೆಂಬಲ ನೀಡಿದರು. ಈ ಮೂಲಕ ಸದನದಲ್ಲಿ ಮುಖ್ಯಮಂತ್ರಿ ಮಂಡಿಸಿದ್ದ ವಿಶ್ವಾಸ ಮತಕ್ಕೆ ಸೋಲಾಗಿದ್ದು, ಮುಖ್ಯ ಮಂತ್ರಿ ರಾಜೀನಾಮೆ ಅನಿವಾರ್ಯ.
ಜುಲೈ ಮೊದಲ ವಾರದಲ್ಲಿ ಕಾಂಗ್ರೆಸ್ ನ 11 ಹಾಗೂ ಜೆಡಿಎಸ್ ನ ಮೂವರು ಶಾಸಕರು ರಾಜೀನಾಮೆ ನೀಡಿದ್ದಲ್ಲಿಂದ ಸರಕಾರ ಅಲ್ಪ ಮತಕ್ಕೆ ಸಿಲುಕಿತ್ತು. ಇದರ ನಡುವೆಯೇ ಇಬ್ಬರು ಪಕ್ಷೇತರರು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದರು.
ಸರಕಾರ ಅಲ್ಪಮತಕ್ಕೆ ಕುಸಿದಿರುವ ಕಾರಣ ಸದನದಲ್ಲಿ ವಿಶ್ವಾಸಮತ ಯಾಚಿಸುವಂತೆ ಪ್ರತಿಪಕ್ಷ ಪಟ್ಟು ಹಿಡಿದಿತ್ತು. ಜು.12 ರಿಂದ ಒಂದಲ್ಲ ಒಂದು ಕಾರಣ ನೀಡಿ ವಿಶ್ವಾಸ ಮತದಾನ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕುತ್ತಲೇ ಬಂದಿರುವ ಸಮ್ಮಿಶ್ರ ಪಕ್ಷದ ಮುಖಂಡರು ಅತೃಪ್ತರನ್ನು ಮತ್ತೆ ಸೆಳೆಯಲು ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದರು.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ? ದಿನಾಂಕ 09/11/2018 ರ ದಿನ ಭವಿಷ್ಯ ಇಲ್ಲಿದೆ ನೋಡಿ.

ಆದರೆ ಅವರೆಲ್ಲ ಮರಳಿ ಬರುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ನಿರ್ಧಾರ ಪ್ರಕಟಿಸಿದ್ದರಿಂದ ಕೊನೆಗೂ ಸಮ್ಮಿಶ್ರ ಸರಕಾರ ಪತನಗೊಂಡಿದೆ.