ಕುಮಟಾ: ಕುಮಟಾದ ಖೈರೆ ಹಾಗೂ ತಂಡ್ರಕುಳಿ ಭಾಗದಲ್ಲಿ ಮಳೆಗಾಲ ಬಂತೆಂದರೆ ಜನರು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಚತುಷ್ಪತ ಕಾಮಗಾರಿಯಿಂದಾಗಿ ಎಲ್ಲಿ ಗುಡ್ಡ ಕುಸಿಯುತ್ತೋ ಎನ್ನುವ ಭೀತಿ ಜನರಿಗೆ .
ಕರಾವಳಿ ಪ್ರದೇಶಗಳಲ್ಲಿ ನಿರಂತರವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ಖೈರೆಯ ಗುಡ್ಡ ಹಾಗೂ ತಂಡ್ರಕುಳಿಯ ಕೆಲ ಭಾಗದಲ್ಲಿ ಗುಡ್ಡ ಕುಸಿದಿದ್ದು, ಇದೇ ರೀತಿ ಮಳೆ ಮುಂದುವರೆದರೆ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಸಂಭವವಿದೆ ಎಂದು ಹೇಳಲಾಗುತ್ತಿದ್ದು ಜನತೆ ಭಯದಲ್ಲಿಯೇ ಬದುಕುವಂತಾಗಿದೆ.
ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ತಂಡ್ರಕುಳಿ ಭಾಗದ ಕೊರೆದ ಗುಡ್ಡಕ್ಕೆ ಕಬ್ಬಿಣದ ರಾಡ್, ಬಲೆ, ಪೈಪುಗಳನ್ನು ಹಾಕಿ ಕಾಂಕ್ರೀಟ್ ಲೇಪನವನ್ನು ಮಾಡಲಾಗಿತ್ತು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡದ ಮೇಲ್ಭಾಗದ ನೀರು ಸಿಮೆಂಟ್ ಲೇಪಿಸಿದ ಸ್ಥಳದಿಂದಲೇ ಹರಿದು ಬರುವುದರಿಂದ ಆ ಭಾಗದ ಮಣ್ಣು ಸಡಿಲಗೊಂಡು ಕೆಲ ಭಾಗದಲ್ಲಿ ಈಗಾಗಲೇ ಗುಡ್ಡ ಕುಸಿದಿದೆ.
ರಸ್ತೆ ಸಂಚಾರದಲ್ಲಿ ವ್ಯತ್ಯವಾಗುವ ಸಂಭವಗಳು ಇದೆ ಎನ್ನುತ್ತಾರೆ ಸ್ಥಳೀಯರು. ಕಾಮಗಾರಿಯನ್ನು ಕೈಗೆತ್ತಿಕೊಂಡ ನಂತರ ಈ ಬಗ್ಗೆ ಸಂಬಂಧ ಪಟ್ಟವರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿತ್ತಾದರೂ ಈ ರೀತಿಯಾಗುತ್ತಿರುವುದು ಜನತೆಗೆ ಭಯ ಹುಟ್ಟಿಸಿದೆ ಎನ್ನಲಾಗಿದೆ.