ನವದೆಹಲಿ : ಕೇಂದ್ರ ಸರ್ಕಾರ ಹೊಸ ಬಿ.ಇಡಿ ಕೋರ್ಸ್‌ಗೆ ಅಧಿಸೂಚನೆ ಹೊರಡಿಸಿದೆ. ಇದರಿಂದ ಇನ್ನು ನಾಲ್ಕೇ ವರ್ಷದಲ್ಲಿ ಪದವಿ ಹಾಗೂ ಬಿಎಡ್ ಮುಗಿಸಬಹುದಾಗಿದೆ ಎಂದು ತಿಳಿದುಬಂದಿದೆ.
ಶಿಕ್ಷಕರ ತರಬೇತಿಗಾಗಿ ಹೊಸ ರೂಪದ ಸಮಗ್ರ ಬಿಇಡಿ ಕೋರ್ಸ್ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಈಗಿನ 2 ವರ್ಷಗಳ ಅವಧಿಯನ್ನು ಪದವಿಯೊಂದಿಗೆ ವಿಸ್ತರಿಸಿದೆ ಎನ್ನಲಾಗಿದೆ.
ಸದ್ಯ ವಿದ್ಯಾರ್ಥಿಗಳು ಮೂರು ವರ್ಷದ ಪದವಿ ಪೂರ್ಣಗೊಳಿಸಿ, ಬಳಿಕ ಎರಡು ವರ್ಷದ ಬಿ.ಇಡಿ ಕೋರ್ಸ್ ಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಹೊಸ ಕೋರ್ಸಿ ನಡಿ ಪಿಯುಸಿ ಅಥವಾ 12ನೇ ತರಗತಿ ಮುಗಿಸಿದ ಕೂಡಲೇ ಬಿಎ-ಬಿಇಡಿ, ಬಿಎಸ್ಸಿ- ಬಿಇಡಿ ಅಥವಾ ಬಿಕಾಂ- ಬಿಇಡಿಗೆ ಪ್ರವೇಶ ಪಡೆಯಬಹುದು. ಇದರಿಂದ 5 ವರ್ಷಗಳ ಬದಲಿಗೆ ನಾಲ್ಕೇ ವರ್ಷದಲ್ಲಿ ಪದವಿ ಮತ್ತು ಬಿಇಡಿ ಶಿಕ್ಷಣ ಎರಡೂ ಪೂರ್ಣಗೊಳ್ಳಲಿದೆ.
ಈ ವರ್ಷದಿಂದಲೇ ಕೋರ್ಸ್ ಪ್ರಾರಂಭವಾಗಲಿದ್ದು, ‘ನಾಲ್ಕು ವರ್ಷಗಳ ಏಕೀಕೃತ ಬಿ.ಇಡಿ ಕೋರ್ಸ್ ಅನ್ನು ರೂಪಿಸಲಾಗಿದೆ. ಹೊಸ ಏಕೀಕೃಕ ಕೋರ್ಸ್‌ನಿಂದಾಗಿ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಳಿತಾಯವಾಗಲಿದೆ. ಹೊಸ ಕೋರ್ಸ್ ಗೆ ಅಗತ್ಯವಿರುವ ಪಠ್ಯವನ್ನು ಅಂತಿಮಗೊಳಿಸಲಾಗಿದೆ. ನೂತನ ಕೋರ್ಸ್ ಅಳವಡಿಸಿಕೊಳ್ಳಬಯಸುವ ಶಿಕ್ಷಣ ಸಂಸ್ಥೆಗಳು ಅದನ್ನು ಮಾಡಬಹುದು’ ಎಂದು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಎಂದು ತಿಳಿದುಬಂದಿದೆ.
ಮೂರು ವಿಧದಲ್ಲಿ ಕೋರ್ಸ್ ಲಭ್ಯವಿರಲಿದೆ. ಬಿಎ-ಬಿಇಡಿ, ಬಿಎಸ್ಸಿ-ಬಿಇಡಿ ಅಥವಾ ಬಿಕಾಂ-ಬಿಇಡಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ, ಎಲ್ಲ ಶಿಕ್ಷಕರಿಗೆ ಬಿಇಡಿ ತರಬೇತಿ ಕಡ್ಡಾಯವಾಗಿದೆ. ತರಬೇತಿ ಪಡೆಯದೇ ಉಳಿದ ಶಿಕ್ಷಕರು 2019 ಅಕ್ಟೋಬರ್ 31 ರ ಒಳಗೆ ತರಬೇತಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.