ಕುಮಟಾ: ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ನೂತನವಾಗಿ ರಚಿತಗೊಂಡ ಮಹಾರಾಣಿ ಅಬ್ಬಕ್ಕ ಗೈಡ್ಸ್ ದಳವನ್ನು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಾಯಕ ಸ್ಕೌಟ್ಸ್ ಆಯುಕ್ತ ಎ.ಎಸ್.ಒ.ಸಿ. ಕರಿಸಿದ್ಧಪ್ಪ ಅವರು ಆಲದ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಅವರು ಗೈಡ್ಸ್ ವಿಂಗ್‍ನ ವಿದ್ಯಾರ್ಥಿ ಹಾಗೂ ಅವರ ಪಾಲಕರನ್ನು ಉದ್ದೇಶಿಸಿ ಅವರು ಅನುಸರಿಸಬೇಕಾದ ನಿಯಮಾವಳಿಗಳನ್ನು ಪಾಲಿಸಬೇಕಾದ ಆಚರಣೆಗಳನ್ನು ತಿಳಿಸಿದರಲ್ಲದೇ ಶಿಸ್ತು, ನಾಯಕತ್ವ ಗುಣ, ದೇಶಭಕ್ತಿ, ಆತ್ಮಸ್ಥೈರ್ಯ, ಧೈರ್ಯ ಹಾಗೂ ಸೇವಾಮನೋಭಾವ ಬೆಳೆಸಿಕೊಳ್ಳಲು ಅಂತರಾಷ್ಟ್ರೀಯ ಸಂಸ್ಥೆ ಗೈಡ್ಸ್‍ನಿಂದ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅತಿಥಿಗಳಾಗಿ ಆಗಮಿಸಿದ ಗೈಡ್ಸ್ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್.ಭಟ್ಟ, ಶಾಲೆಯಲ್ಲಿ ಗೈಡ್ಸ್ ವಿಂಗ್‍ನಿಂದ ಉತ್ತಮ ನಾಯಕತ್ವ ಗುಣ ಪ್ರದರ್ಶಿಸಿಸುವ ಓರ್ವರಿಗೆ ಪ್ರತಿವರ್ಷ ವಾರ್ಷಿಕೋತ್ಸವದ ದಿನ ಪ್ರಶಸ್ತಿ ಪತ್ರ ಮತ್ತು ಶೀಲ್ಡ್ ನೀಡಲು ಅನುಕೂಲವಾಗುವಂತೆ ಮೂಲಧನ ನೀಡುವುದಾಗಿ ಘೋಷಿಸಿದರು. ತರಬೇತಿ ಶಿಬಿರದ ಸಮಯದಲ್ಲಿ ಮಕ್ಕಳಲ್ಲಿ ಅವ್ಯಕ್ತವಾಗಿರುವ ಸಂಸ್ಕಾರ ವ್ಯಕ್ತಗೊಳ್ಳುತ್ತಾ ಇತರರೂ ಅದನ್ನು ಅನುಕರಿಸಲು ನೆರವಾಗುತ್ತದೆ ಎಂದು ಜಿಲ್ಲಾ ಗೈಡ್ಸ್ ದಳದ ಕಾರ್ಯದರ್ಶಿ ಬಿ.ಡಿ.ಫರ್ನಾಂಡಿಸ್ ಮಂಡಿಸಿದರು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುವುದರೊಂದಿಗೆ ವಿಶ್ವದ ಸವಾಲುಗಳನ್ನು ಎದುರಿಸುವ ತಂತ್ರ, ಪ್ರತಿಭಾ ಕೌಶಲ್ಯ ವೃದ್ಧಿಸುವ ಕುಶಲತೆ, ಬಾಹ್ಯ ಜಗತ್ತನ್ನು ಸಂಪರ್ಕಿಸುವ ಕಲೆ ಕರಗತವಾಗುತ್ತದೆಂದು ಮುಖ್ಯಾಧ್ಯಾಪಕ ಎನ್.ಆರ್. ಗಜು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೈಡ್ಸ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸ್ಥಳೀಯ ಸ್ಕೌಟ್ಸ್ ಸಂಚಾಲಕ ಕೆ.ಪಿ.ಭಂಡಾರಿ ಸ್ವಾಗತಿಸಿದರು. ಜಿಲ್ಲಾ ಗೈಡ್ಸ್ ತರಬೇತಿ ಆಯುಕ್ತೆ ಬೇಬಿ ಪಡಿಯಾರ ನಿರೂಪಿಸಿದರು. ಗೈಡ್ಸ್ ವಿಂಗ್ ಶಿಕ್ಷಕಿ ಚಂದ್ರಕಲಾ ಆಚಾರ್ಯ, ಶಿಕ್ಷಕವೃಂದದವರು, ತರಬೇತಿ ನಿರತ ಶಿಕ್ಷಕರು ಸಹಕರಿಸಿದರು. ಶಿಕ್ಷಕ ಕಿರಣ ಪ್ರಭು ವಂದಿಸಿದರು.

RELATED ARTICLES  ಮಮತಾ ನಾಯ್ಕಗೆ ಕುವೆಂಪು ವಿ.ವಿ ಡಾಕ್ಟರೇಟ್