ನಮ್ಮ ಊರ ಕಡೆ ಹಿತ್ತಿಲಲ್ಲಿ ಬೆಳೆಯುವ ಹೆಚ್ಚಿನ ಎಲ್ಲ ಬಗೆಯ ತರಕಾರಿ, ಸೊಪ್ಪು ಮತ್ತು ಹಣ್ಣುಗಳಿಂದಲೂ ಒಂದಿಲ್ಲೊಂದು ಬಗೆಯ ಮೇಲೋಗರ ತಯಾರಿಸುತ್ತಾರೆ. ಜೂನ್ – ಜುಲೈ ತಿಂಗಳು ಧಾರಾಕಾರವಾಗಿ ಮಳೆ ಸುರಿಯುವಾಗ ಮಾವು, ಹಲಸು, ಪೈನಾಪಲ್ ಇತ್ಯಾದಿ ಹಣ್ಣುಗಳ ಅಬ್ಬರವೂ ಜೋರು. ಇವನ್ನು ಬಳಸಿ ಕಡುಬು, ಜ್ಯಾಮ್, ಹಲ್ವಾ, ಪಾಯಸ, ನೀರ್ಗೊಜ್ಜು, ಸಾಸಿವೆ, ಹೀಗೆ ಎಷ್ಟೊಂದು ಬಗೆಯ ಮೇಲೋಗರ, ಸಿಹಿತಿಂಡಿ ಗಳನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
- ಸಿಪ್ಪೆ ತೆಗೆದು ಹೆಚ್ಚಿದ ಪೈನಾಪಲ್ – 1 1/4 ಕಪ್
- ತೆಂಗಿನತುರಿ – 1/2 ಕಪ್
- ಎಳ್ಳು – 1 1/4 ಟೀ ಸ್ಪೂನ್
- ಸಾಸಿವೆ – 3/4 ಟೀ ಸ್ಪೂನ್
- ಒಣಮೆಣಸು ಅಥವಾ ಹಸಿಮೆಣಸು – ಒಂದು ಚಿಕ್ಕ ಚೂರು
- ಅರಿಶಿನ – 1/4 ಟೀ ಸ್ಪೂನ್
- ಉಪ್ಪು – 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಬೆಲ್ಲ / ಸಕ್ಕರೆ – 4 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ನೀರು – ಅರ್ಧ ಕಪ್
- ಮೊಸರು – ಅರ್ಧ ಕಪ್
ಒಗ್ಗರಣೆಗೆ: ಎಣ್ಣೆ (ತೆಂಗಿನೆಣ್ಣೆ ಉತ್ತಮ) – 1 ಟೀ ಸ್ಪೂನ್, ಸಾಸಿವೆ – 1 ಟೀ ಸ್ಪೂನ್
ತಯಾರಿಸುವ ವಿಧಾನ:
- ಪೈನಾಪಲ್ ಚೂರುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಉಪ್ಪು, ಬೆಲ್ಲ, ಅರ್ಧ ಕಪ್ ನೀರು ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. 5 ನಿಮಿಷ ಕುದಿಸಿ ಉರಿ ಆಫ್ ಮಾಡಿ, ಮಿಶ್ರಣ ತಣ್ಣಗಾಗಲು ಬಿಡಿ.
- ಪೈನಾಪಲ್ ಬೇಯಿಸಿದ ನೀರನ್ನು ಪ್ರತ್ಯೇಕವಾಗಿ ತೆಗೆದಿಡಿ.
- ತಣ್ಣಗಾದ ಪೈನಾಪಲ್ ಚೂರುಗಳನ್ನು ತೆಂಗಿನತುರಿ, ಎಳ್ಳು, ಸಾಸಿವೆ, ಮೆಣಸು, ಅರಿಶಿನದೊಡನೆ ನುಣ್ಣಗೆ ರುಬ್ಬಿ. ಪೈನಾಪಲ್ ಬೇಯಿಸಿದ ನೀರನ್ನೇ ರುಬ್ಬುವಾಗ ಬಳಸಿ.
- ರುಬ್ಬಿದ ಮಿಶ್ರಣಕ್ಕೆ ಅರ್ಧ ಕಪ್ ನಷ್ಟು ಮೊಸರು ಸೇರಿಸಿ, ರುಚಿ ನೋಡಿ ಉಪ್ಪು ಅಥವಾ ಸಿಹಿ ಬೇಕಿದ್ದರೆ ಸೇರಿಸಿ. ಮಿಶ್ರಣ ತುಂಬಾ ದಪ್ಪವೆನಿಸಿದರೆ ಸ್ವಲ್ಪ ನೀರು ಸೇರಿಸಿ. ಆದರೆ ತುಂಬಾ ತೆಳ್ಳಗಾದರೆ ಚೆನ್ನಾಗಿರುವುದಿಲ್ಲ.
- ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಹಾಕಿ ಚಟಪಟ ಎಂದಾಗ ಅದನ್ನು ಸಾಸಿವೆ ರುಬ್ಬಿದ ಮಿಶ್ರಣಕ್ಕೆ ಸೇರಿಸಿದರೆ ರುಚಿಯಾದ ಪೈನಾಪಲ್ ಸಾಸಿವೆ ಅನ್ನದೊಡನೆ ಸವಿಯಲು ಸಿದ್ಧ!