ಭಟ್ಕಳ: ದಿನಕಳೆದಂತೆ ಆಧಾರ ಬೇಡಿಕೆ ಹೆಚ್ಚಾಗುವುದರೊಂದಿಗೆ ಅದನ್ನು ಪಡೆದುಕೊಳ್ಳುವ ಬಿಕ್ಕಟ್ಟು ವಿಪರೀತವಾಗುತ್ತಿದೆ. ಎಲ್ಲೆಲ್ಲೂ ಆಧಾರ ಕಾರ್ಡ್ ನ ಕೂಗೆ ಕೇಳಿಸುತ್ತಿದ್ದು, ಆದರೆ ಅದೇ ಪ್ರಗತಿಯಲ್ಲಿ ಆಧಾರ ನೋಂದಣಿ ತಿದ್ದುಪಡಿ ಆಗುತ್ತಿಲ್ಲ. ಇದರಿಂದ ಅಂಚೆಕಛೇರಿ, ಅಟಲ್‍ಜೀ ಜನಶ್ರೀ ಕೇಂದ್ರ ಎದುರು ಎರಡು ಮೂರು ದಿನ ಹಸಿವು ಬಾಯರಿಕೆಯಿಂದ ಸರತಿಯಲ್ಲಿ ನಿಂತುಕೊಂಡು ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಸೋಮವಾರ ಇಲ್ಲಿನ ಜನಶ್ರೀ ಕೇಂದ್ರದ ಎದುರು ಬೆಳಗಿನ ಜಾವ ಸಾರ್ವಜನಿಕರು ಸರತಿಯಲ್ಲಿ ನಿಂತಿರುವದು ಕಂಡು ಬಂತು.
ಈ ಹಿಂದೆ ಗ್ರಾಮ ಪಂಚಾಯಿತಿ, ಜನಶ್ರೀ ಕಛೇರಿ, ನಾಡ ಕಛೇರಿ ಸೇರಿದಂತೆ ವಿವಿಧ ವ್ಯಾಪ್ತಿಯಲ್ಲಿ ಹೊಸ ಆಧಾರ ಕಾರ್ಡ, ಆಧಾರ ಹೆಸರು, ಮೊಬೈಲ್ ನಂಬರ್, 15 ವರ್ಷ ಮೇಲ್ಪಟ್ಟ ಮಕ್ಕಳ ಹೊಸ ಆಧಾರ ಕಾರ್ಡ ಮಾಡಿಸಿಕೊಡುವಂತೆ ಆದೇಶ ಹೊರಡಿಸಿತ್ತು. ಆದರೆ ನಂತರ ಸರ್ಕಾರ ಈ ಆದೇಶವನ್ನು ಹಿಂಪಡೆದಿದ್ದು ಆಧಾರ ನೋಂದಣಿ ಮಾಡುವವರಿಗೆ ತೊಂದರೆ ಎದುರಾಗಿದೆ.
ಪ್ರಸ್ತುತ ತಾಲೂಕಿನ ಅಂಚೆ ಕಛೇರಿ ಹಾಗೂ ಜನಶ್ರೀ ಕೇಂದ್ರ ಬಿಟ್ಟರೆ ಬೇರೆಲ್ಲಿಯೂ ಆಧಾರ ಕಾರ್ಡ ಮಾಡುತ್ತಿಲ್ಲವಾಗಿದ್ದು, ತಾಲೂಕಿನ ದೂರು ಹಳ್ಳಿಗಳಿಂದ ಜನರು ತಮ್ಮೆಲ್ಲ ಕೆಲಸ ಬಿಟ್ಟು ಆಧಾರ ಸರಿಪಡಿಸುವಿಕೆ, ಬದಲಾವಣೆ ಮಾಡಿಸಿಕೊಳ್ಳಲು ಬರಲಿದ್ದು, ಆದರೆ ದಿನಕ್ಕೆ ಕೇವಲ 40 ಮಂದಿಯ ಕಾರ್ಡ ಮಾಡಿಸುವ ಅಥವಾ ತಿದ್ದುಪಡಿ ಮಾಡುವ ಕೆಲಸ ಮಾಡುತ್ತಿರುವ ಅಂಚೆ ಕಛೇರಿಯಲ್ಲಿ ಆಧಾರ ಕಾರ್ಡ ಮಾಡಿಸಿಕೊಳ್ಳುವ ಜನರು ಬೆಳಿಗ್ಗೆ 4 ಗಂಟೆಗೆ ಕೂಪನಗಾಗಿ ಕುಳಿತರೆ ತಮ್ಮ ಊಟ ತಿಂಡಿ ಬಿಟ್ಟು ಆಧಾರ ಮಾಡಿಸಿಕೊಳ್ಳುವವರೆಗೂ ಹಾಗೇ ಇರಬೇಕಾಗಿದೆ.