ಮಂಗಳೂರು : ಸೋಮವಾರ ಸಂಜೆಯಿಂದ ಮಂಗಳೂರಿನ ನೇತ್ರಾವತಿ ನದಿ ಸೇತುವೆಯ ಬಳಿಯಿಂದ ಕಾಣೆಯಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ, ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರಿಗಾಗಿ ಸತತ 36 ಗಂಟೆಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಆದರೆ ಇದೀಗ ಅವರ ಮೃತದೇಹ ನೇತ್ರಾವತಿಯ ಹಿನ್ನೀರಿನಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಕಾಫಿ ಡೇ ನೌಕಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸೋಮವಾರ ಸಂಜೆ ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ರಾತ್ರಿ 7.30 ರ ಸುಮಾರಿಗೆ ಕಾರಿನಲ್ಲಿ ಚಾಲಕನ ಜೊತೆ ಉಳ್ಳಾಲದತ್ತ ತೆರಳಿ ಕಾರನ್ನು ಒಂದು ಸೇತುವೆ ಬಳಿ ನಿಲ್ಲಿಸಲು ಹೇಳಿ, ಏಕಾಂಗಿಯಾಗಿ ಸೇತುವೆಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಆ ಬಳಿಕ ಚಾಲಕ ಸುಮಾರು 9 ಗಂಟೆಯವರೆಗೆ ಕಾದರೂ ಸಿದ್ಧಾರ್ಥ್ ಬರಲಿಲ್ಲ. ಇದಕ್ಕೆ ಆತಂಕಗೊಂಡು ಚಾಲಕ ಪೊಲೀಸ್ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಇನ್ನೇನು ಕೆಲವೇ ಕ್ಷಣದಲ್ಲಿ ನಡೆಯಲಿದ್ದು, ಹಿರಿಯ ವೈಧ್ಯರುಗಳ ನೇತೃತ್ವದಲ್ಲಿ ಸಿದ್ಧಾರ್ಥ್ ಅವರ ಮೃತದೇಹದ ಮರೋಣೋತ್ತರ ಪರೀಕ್ಷೆಯು ವಿಡಿಯೋ ಚಿತ್ರೀಕರಣದೊಂದಿಗೆ ನಡೆಯಲಿದೆ ಎನ್ನಲಾಗಿದೆ.
ಪೊಲೀಸರು ಸಿದ್ಧಾರ್ಥ ಪಾರ್ಥಿವ ಶರೀರವನ್ನು ಸಂಬಂಧಿಕರಿಗೆ ಅಧಿಕೃತವಾಗಿ ಒಪ್ಪಿಸಿದ ಬಳಿಕ ಮೂಡಿಗೆರೆ ತಾಲೂಕಿನ ಚೆಟ್ನಹಳ್ಳಿಯ ಚೇತನಹಳ್ಳಿ ಎಸ್ಟೇಟ್‌ಗೆ ತೆಗೆದುಕೊಂಡು ಹೋಗಲಾಗುವುದು. ನಂತರ ಅಂತ್ಯ ಸಂಸ್ಕಾರಕ್ಕೂ ಮುನ್ನ ಸಿದ್ಧಾರ್ಥ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ವರದಿಯಾಗಿದೆ