ಭಟ್ಕಳ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಇಂದು ಶುಕ್ರವಾರ ಸಂಜೆ ಸರಕಾರಿ ಪ್ರೌಢಶಾಲೆ ಮುಂಡಳ್ಳಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.
ಪರಿಸರದ ಮಹತ್ವ ಅರಿತು,ಅವುಗಳಿಗೆ ತಕ್ಕಂತೆ ನಾವು ಬದಲಾಗಬೇಕೆ ಹೊರತು.ನಾವು ನಮಗೆ ಬೇಕಾದ ಹಾಗೆ ಪರಿಸರವನ್ನು ಬದಲಾಯಿಸಿದರೆ ವಿಪತ್ತು ಕಟ್ಟಿಟ್ಟ ಬುತ್ತಿ.ಹಾಗಾಗಿ ಇಂದಿನಿಂದಲೇ ನಾವು ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ ಎಂದು ಪರಿಸರದ ಬಗ್ಗೆ ಶಿಕ್ಷಕ ಗಣೇಶ ಹೆಗಡೆ ಮಾತನಾಡಿದರು.
ಪರಿಸರದ ಬಗ್ಗೆ ಮೊದಲು ಪ್ರೀತಿ ಹುಟ್ಟಬೇಕು,ಅದು ಮೊಗ್ಗಾಗಿ ಅರಳಬೇಕು. ದೇಶ, ರಾಜ್ಯ ನಮ್ಮೂರು ನಮ್ಮ ಜನ ನನ್ನ ಪರಿಸರ ಎನ್ನುವ ಪ್ರೀತಿ ಮಕ್ಕಳಲ್ಲಿ ಹುಟ್ಟಬೇಕಾದರೆ ಸಂಸ್ಕಾರಯುತ ಶಿಕ್ಷಣ ಕೂಡ ಅಗತ್ಯ. ಅಂತಹ ಶಿಕ್ಷಣ ಪಡೆದ ವ್ಯಕ್ತಿ ಎಲ್ಲವನ್ನೂ ಪ್ರೀತಿಸುತ್ತಾನೆ ಕಾಳಜಿಯಿಂದ ನೋಡುತ್ತಾನೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಸಾಹಿತಿ ಉಮೇಶ ಮುಂಡಳ್ಳಿ ನುಡಿದರು. ಒಕ್ಕೂಟದ ಅಧ್ಯಕ್ಷರಾದ ನಾರಾಯಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಲಯ ಮೇಲ್ವಿಚಾರಕ ಭರತ್ ಅವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಮುಂಡಳ್ಳಿ ಸಂಘದ ಒಕ್ಕೂಟದ ಅಧ್ಯಕ್ಷೆ ರಾಧಾ ಮೊಗೇರ, ಪಂಚಾಯತ್ ಸದಸ್ಯೆ ಮಂಜಮ್ಮ ನಾಯ್ಕ ಮೊದಲಾದವರು ಇದ್ದರು. ಮುಂಡಳ್ಳಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಡಿ.ಟಿ.ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಚೆನ್ನವೀರಪ್ಪ ಹೊಸ್ಮನಿ ನಿರ್ವಹಿಸಿದರು. ಮಾಲತಿ ನಾಯಕ ವಂದಿಸಿದರು.
ಶಾಲಾ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರು ಹಾಗೂ ಧರ್ಮಸ್ಥಳ ಸಂಘದ ಹೆಚ್ಚಿನ ಮಹಿಳಾ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದ ಮೊದಲು ಶಾಲಾ ಆವರಣದಲ್ಲಿ ಹಲವು ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು.