ಕುಮಟಾ: ಇಲ್ಲಿಯ ನಾದಶ್ರೀ ಕಲಾಕೇಂದ್ರದ ರೋಟರಿ ಸಭಾಭವನದಲ್ಲಿ ರೋಟರಿ ಕ್ಲಬ್ ವಾರದ ಸಭೆಯಲ್ಲಿ ಹಾಸ್ಯ ರಸ ಸಂಜೆಯನ್ನು ಏರ್ಪಡಿಸಲಾಗಿತ್ತು. ವಾಗ್ಮಿ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘದ ನಿವೃತ್ತ ಪ್ರಬಂಧಕ ಎಮ್.ಎನ್.ಹೆಗಡೆ ಸ್ವಾರ್ಥ ರಹಿತ ಸಮಾಜ ಸೇವೆಯ ಕುರಿತು ಮಾತನಾಡುತ್ತಾ ಅದೊಂದು ಉಪಕಾರ ಸ್ಮರಣೆ ರಹಿತ ಬದುಕೆಂದು ಹೀಗಳೆಯದೇ ಆತ್ಮತೃಪ್ತಿಗಾಗಿ ಅರ್ಪಿತ ಬದುಕಾಗಿದೆ ಎಂದು ಭಾವಿಸಿ ಸಂತೋಷಿಸಿ ಎಂದು ಅಭಿಪ್ರಾಯಪಟ್ಟರು.
ಅನೇಕ ಜೀವಂತ ಹಾಸ್ಯ ಚಟಾಕಿಗಳನ್ನು ಹರಿಬಿಡುವ ಮೂಲಕ ನಿತ್ಯದ ಒತ್ತಡದ ಬದುಕಿಗೆ ಜರ್ಜರಿತ ಮನಸ್ಸುಗಳಿಗೆ ಹರ್ಷ ತುಂಬಿ ನಿರಾಳರನ್ನಾಗಿಸಿದರು. ಕಲ್ಪಿತ ಹಾಗೂ ನೋಯಿಸದ ನಿರ್ಮಲ ಹಾಸ್ಯ ದೀರ್ಘಾಯುಷ್ಯ ನೀಡಬಲ್ಲದೆಂದು ನಗುನಗುತ್ತಾ ನುಡಿದರು. ರೋಟರಿ ಅಧ್ಯಕ್ಷ ಸುರೇಶ ಭಟ್ ಸ್ವಾಗತಿಸಿದರು. ಎನ್.ಆರ್.ಗಜು ಪರಿಚಯಿಸಿದರು. ವಿನಾಯಕ ಹೆಗಡೆ ರೋಟರಿ ಧ್ಯೇಯವಾಕ್ಯ ವಾಚಿಸಿದರು. ರೋಟರಿ ಅಸಿಸ್ಟಂಟ್ ಗವರ್ನರ್ ಜಿ.ಎಸ್.ಹೆಗಡೆ ಪಲ್ಸ್ ಪೋಲಿಯೋ ನಿರ್ಮೂಲನಾ ಯಾತ್ರೆಯಲ್ಲಿ ರೋಟರಿ ಕೊಡುಗೆ ಕುರಿತು ಮಾತನಾಡಿ, ಅದರ ನಿರ್ವಹಣೆಗೆ ದೇಣಿಗೆ ನೀಡಿ ಇತರ ಸದಸ್ಯರಿಂದಲೂ ಅಪೇಕ್ಷಿಸಿದರು. ಕಾರ್ಯದರ್ಶಿ ಕಿರಣ ನಾಯಕ ವಂದಿಸಿದರು.
ಈ ಸಂದರ್ಭದಲ್ಲಿ ತಮ್ಮ 85 ನೇ ಜನ್ಮದಿನವನ್ನು ದಯಾನಿಲಯ ಶಾಲೆಯ ವಿಶೇಷ ಅಗತ್ಯವುಳ್ಳ ಮಕ್ಕಳೊಂದಿಗೆ ವಿಶಿಷ್ಠವಾಗಿ ಆಚರಿಸಿಕೊಂಡ ಎಸ್.ಎಸ್.ಭಟ್ಟ ಲೋಕೇಶ್ವರ ಅವರನ್ನು ಗೌರವಿಸಲಾಯಿತು.