ಕುಮಟಾ :ತಾಲೂಕಿನಾದ್ಯಂತ ವಿಪರೀತ ಗಾಳಿ ಮಳೆಯಿಂದಾಗಿ ಸೋಮವಾರದಿಂದ ಅಘನಾಶಿನಿ, ಚಂಡಿಕಾ, ಬಡಗಣಿ ಇನ್ನಿತರ ನದಿ ಹಳ್ಳ-ತೊರೆಗಳು ಅಪಾಯಕಾರಿಯಾಗಿ ತುಂಬಿ ಹರಿಯುತ್ತಿದ್ದು ಮಂಗಳವಾರವೂ ಪ್ರವಾಹ ಪರಿಸ್ಥಿತಿ ಮುಂದುವರೆದು ಹಲವಾರು ಗ್ರಾಮಗಳು ಜಲಾವೃತವಾಗಿದೆ. ಗಂಜಿಕೇಂದ್ರಗಳನ್ನು ತೆರೆದು ಜನರನ್ನು ಸ್ಥಳಾಂತರಿಸಲಾಗಿದೆ. 
ತಾಲೂಕಿನ ಹೆಗಡೆ ಪಂಚಾಯಿತಿ ವ್ಯಾಪ್ತಿಯ ತಾಡುಕಟ್ಟಾ, ನರಿಬೋಳೆ, ತಾರಿಬಾಗಿಲ, ಮಾಸೂರು, ಲುಕ್ಕೇರಿ ಮತ್ತಿತರ ಪ್ರದೇಶಗಳು, ಮಿರ್ಜಾನ ಪಂಚಾಯಿತಿ ವ್ಯಾಪ್ತಿಯ ಕಲ್ಮಟ್ಟಿ, ಛತ್ರಕುರ್ವೆ, ಕೋಡ್ಕಣಿ ಪಂಚಾಯಿತಿಯ ಐಗಳಕುರ್ವೆ, ಛತ್ರಕುರ್ವೆ, ಬೇಲೆ, ಶಶಿಹಿತ್ತಲ ಇನ್ನಿತರ ಪ್ರದೇಶಗಳು ಕಾಗಾಲ ಪಂಚಾಯಿತಿ ವ್ಯಾಪ್ತಿಯ ಹಿಣಿ, ಕೆಳಗಿನಕೊಪ್ಪ, ಕೂಜಳ್ಳಿ ಪಂಚಾಯಿತಿ ವ್ಯಾಪ್ತಿಯ ಕೋನಳ್ಳಿ ಹಿರೇಕಟ್ಟು, ಊರಕೇರಿ ಬಳಿಯ ಗುಮ್ಮನಗುಡಿ, ಅಲ್ಲಿಗೆ ಸನಿಹದ ಗುಡ್ನಕಟ್ಟು, ಹೊಲನಗದ್ದೆ ಪಂಚಾಯಿತಿ ವ್ಯಾಪ್ತಿಯ ಹಣ್ಣೆಮಠ, ಮಾಣಿಕಟ್ಟಾ, ದಿವಗಿ ಪಂಚಾಯಿತಿಯ ಕೆಳಗಿನಕೇರಿ, ಮಣಕೋಣ ಸೇರಿದಂತೆ ಹಲವಾರು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಊರಿಗೇ ಊರೇ ಜಲಾವೃತವಾಗಿದೆ. 


ಜಲಾವೃತಗೊಂಡ ಪ್ರದೇಶಗಳಿಂದ ತಾಲೂಕಾಡಳಿತ ಸ್ಥಳೀಯರ ಸಹಕಾರದಲ್ಲಿ ದೋಣಿಗಳ ಮುಖಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಹಿರೇಕಟ್ಟಿನಲ್ಲಿ ವೃದ್ಧೆಯೋರ್ವಳನ್ನು ಬೆತ್ತದ ಚೂಳಿಯಲ್ಲಿ ಹೊತ್ತು ಸಾಗಿಸಲಾಗಿದೆ. ಕೆಲವೆಡೆ ಜನರು ಮನೆಯೊಳಗೆ ನೀರು ಹೊಕ್ಕು ಸ್ಥಳಾಂತರಗೊಳ್ಳಲು ಮಾರ್ಗ ಇಲ್ಲದಂತಾದರೂ ಮನೆಬಿಟ್ಟು ಬರಲು ಸಿದ್ಧರಾಗದೇ ಇರುವುದು ಪರಿಹಾರ ಕಾರ್ಯದಲ್ಲಿ ತೊಡಗಿರುವ ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಗಂಜಿಕೇಂದ್ರಗಳಿಗೂ ಬರದೇ ಸನಿಹದ ನೆಂಟರಿಷ್ಟರ ಮನೆಗೆ ತೆರಳಿರುವುದು ಬಿಸಿಯೂಟ ತಯಾರಕರಿಗೂ ಗೊಂದಲ ಮೂಡಿಸಿದೆ. 
ಮಳೆಯೊಂದಿಗೆ ಜೋರಾಗಿ ಗಾಳಿಯೂ ಬೀಸುತ್ತಿದ್ದು ಕಾಗಾಲದಲ್ಲಿ ದಿವಾಕರ ನಾಯ್ಕರ ಮನೆ ಮೇಲೆ ಮರ ಬಿದ್ದು ಹಾನಿಯಾದರೆ, ಕೋಡ್ಕಣಿಯಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದಿದೆ. ಪಟ್ಟಣದ ಚಿತ್ರಿಗಿಯಲ್ಲಿ ೧೧ ಕೆವಿ ವಿದ್ಯುತ್ ಮುಖ್ಯಮಾರ್ಗದ ಮೇಲೆ ಮರ ಬಿದ್ದು ಹಾನಿಯಾಗಿದ್ದು ವಿದ್ಯುತ್ ವ್ಯತ್ಯಯವಾಗಿದೆ. 
ಚಂಡಿಕಾ ನದಿಯ ಪ್ರವಾಹದಿಂದ ಕತಗಾಲದಲ್ಲಿ ಕುಮಟಾ -ಶಿರಸಿ-ರಸ್ತೆ ಬಂದ್ ಆಗಿದ್ದು ಮಂಗಳವಾರ ಬೆಳಗಿನ ಜಾವ ಕೆಲ ತಾಸು ಮಾತ್ರ ಇಲ್ಲಿ ನೀರಿಳಿದು ವಾಹನಗಳ ಓಡಾಟ ಸಾಧ್ಯವಾಗಿತ್ತು ಬಳಿಕ ಪುನಃ ನೀರಿನ ಮಟ್ಟ ಏರಿದ್ದರಿಂದ ವಾಹನಸಂಚಾರ ಸ್ಥಗಿತಗೊಂಡಿದೆ. ದೋಣಿಯ ಮೂಲಕ ರಸ್ತೆಯ ಎರಡೂ ದಿಕ್ಕಿನ ಪ್ರಯಾಣಿಕರನ್ನು ಆಚೀಚೆ ದಡ ಸೇರಿಸುವ ಕಾರ್ಯ ಮಾಡಲಾಗಿದೆ. ರಸ್ತೆ ಬಂದ್ ಆಗಿರುವುದರಿಂದ ಸಾರಿಗೆ ಬಸ್ ಹಾಗೂ ಇತರ ವಾಹನಗಳು ಕಿಮೀಗಟ್ಟಲೆ ಸಾಲುಗಟ್ಟಿದ್ದು ದಿವಗಿ ಹಾಗೂ ಕುಮಟಾ ಬಸ್ ನಿಲ್ದಾಣದಲ್ಲಿ ನೂರಾರು ವಾಹನಗಳು ಕಾಯುತ್ತಾ ನಿಂತಿದ್ದವು.

RELATED ARTICLES  ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಶೆಟ್ಟಿ.


ಸೋಮವಾರ ತಡರಾತ್ರಿಯೂ ಉಪವಿಭಾಗಾಽಕಾರಿ ಪ್ರೀತಿ ಗೆಹ್ಲೋಟ್ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿದ್ದರು. ಶಾಸಕ ದಿನಕರ ಶೆಟ್ಟಿ, ತಹಸೀಲ್ದಾರ್ ಮೇಘರಾಜ ನಾಯ್ಕ ಹಾಗೂ ಇತರ ಅಽಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಪದೇಪದೇ ಭೇಟಿಯಿತ್ತು ನಿಗಾ ವಹಿಸಿದರು. ಎಲ್ಲಿಯೇ ಗಾಳಿಮಳೆಯಿಂದ ಹಾನಿಯಾದರೂ ಕೂಡಲೇ ಪರಿಹಾರ ಕ್ರಮ ಮತ್ತು ಸಹಾಯ ಒದಗಿಸಲು ಶಾಸಕರು ಅಽಕಾರಿಗಳಿಗೆ ನಿರ್ದೇಶನ ನೀಡಿದರು. 
ಒಟ್ಟಾರೆ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ವಿಪರೀತದ ಗಾಳಿಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಪೀಡಿತ ಪ್ರದೇಶದ ಜನರಿಗೆ ತಮ್ಮ ಆಸ್ತಿಪಾಸ್ತಿಯ ಜೊತೆಗೆ ಪ್ರೀತಿಯಿಂದ ಸಾಕಿದ ಜಾನುವಾರುಗಳ ರಕ್ಷಣೆ ಕಷ್ಟಕರವಾಗಿದೆ. ಕುಮಟಾ ಪಟ್ಟಣದಲ್ಲಿ ಜನರ ಓಡಾಟ ವಿರಳವಾಗಿದ್ದು ಹಲವೆಡೆ ರಸ್ತೆಗಳ ಮೇಲೆಯೇ ನೀರು ಹರಿದು ಸಂಚಾರ ಕಿರಿಕಿರಿದಾಯಕವಾಗಿದೆ. ಗದ್ದೆ ತೋಟಗಳಲ್ಲಿ ಕಳೆದ ೨೪ ಗಂಟೆಗೂ ಹೆಚ್ಚು ಕಾಲದಿಂದ ನೀರು ನಿಂತಿರುವದರಿಂದ ಕೃಷಿಗೂ ಹಾನಿಯಾಗುವ ಸಂಭವ ಎದುರಾಗಿದೆ. ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿದೆ.

RELATED ARTICLES  ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ ಗಾಂಧೀಜಿ ಪುಸ್ತಕ ಬಿಡುಗಡೆ!