ಕುಮಟಾ: ಇಲ್ಲಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ಬಿ.ಎಡ್., ವ್ಯಾಸಂಗ ಮಾಡುತ್ತಿರುವ ಕುಮಾರಿ ಗೀತಾ ಸಂದಿಗೋಡಮಠ ವಿದ್ಯಾರ್ಥಿ ಕವಿಗಳಿಗೆ ನೀಡುವ ಸನದಿ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಡಾ.ಬಿ.ಎ.ಸನದಿ ಸಾಹಿತ್ಯ ಸಂಘದ ಅಧ್ಯಕ್ಷ ಎನ್.ಆರ್.ಗಜು ಹಾಗೂ ಸಂಚಾಲಕ ಸುರೇಶ ಪೈ, ಹಿರಿಯ ಶಿಕ್ಷಕ ವಿಷ್ಣು ಭಟ್ಟ ಆಯ್ಕೆ ಸಮಿತಿಯ ನಿರ್ಧಾರವನ್ನು ಪ್ರಕಟಿಸಿದ್ದು ಪ್ರಶಸ್ತಿಯು 2 ಸಾವಿರ ನಗದು, ಫಲಕ, ಪತ್ರಗಳನ್ನೊಳಗೊಂಡಿದ್ದು, ದಿ.18 ರಂದು ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುವುದು.
ಗೀತಾ ಸಂದಿಗೋಡಮಠ
ಮೂಲತಃ ಧಾರವಾಡದವರಾದ ಗೀತಾ ಸಂದಿಗೋಡಮಠ ಅವರು, ವಿದ್ಯಾರ್ಥಿದೆಸೆಯಲ್ಲಿಯೇ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. 47 ಕವನ, 2 ಕಥೆ, ಲೇಖನಗಳನ್ನು ಬರೆದ ಅನುಭವ ಅವರಿಗಿದೆ. ಕುಪ್ಪಳ್ಳಿಯಲ್ಲಿ ನಡೆದ ಸಾಹಿತ್ಯ ಕಮ್ಮಟದಲ್ಲಿ, ಮೈಸೂರು ಸಾಹಿತ್ಯ ಸಂಭ್ರಮದಲ್ಲಿ, ಧಾರವಾಡ ಹಾಗೂ ಕುಮಟಾದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ 2 ಸುವರ್ಣ ಪದಕ ಪಡೆದಿದ್ದಲ್ಲದೇ ನಗದು ಬಹುಮಾನಗಳಿಂದ ಪುರಸ್ಕರಿಸಲ್ಪಟ್ಟಿದ್ದಾರೆ. ಅರ್ಥಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದು ವಿಶ್ವವಿದ್ಯಾಲಯಕ್ಕೆ 3 ನೆಯ ರ್ಯಾಂಕ್ ಗಳಿಸಿರುತ್ತಾರೆ. ಸಾಹಿತ್ಯದ ಗಂಧ ಗಾಳಿಗೆ ಅವಕಾಶವಿಲ್ಲದ ಹಿನ್ನೆಲೆಯುಳ್ಳ ಅವಿಭಕ್ತ ಕೃಷಿಕ ಕುಟುಂಬದಿಂದ ಬಂದ ಗೀತಾ ಅವರ ಸಾಹಿತ್ಯಾಸಕ್ತಿ, ಕಾವ್ಯವಾಚನಾ ಅಭಿವ್ಯಕ್ತಿ ಪರಿಗಣಿಸಿ ಈ ಪ್ರಶಸ್ತಿ ಸಂದಿದೆ.