ಕುಮಟಾ: ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜುಕೇಶನ್ ವತಿಯಿಂದ ಪ್ರತಿವರ್ಷವೂ ಕೊಂಕಣಿ ಮಾನ್ಯತಾ ದಿವಸದಂದು ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕಿ ದಿವಂಗತ ವಿನಯಾ ಶ್ಯಾನಭಾಗ ಸ್ಮರಣಾರ್ಥವಾಗಿ ನೀಡುತ್ತಿರುವ ‘ವಿನಯಸ್ಮೃತಿ ಸಮರ್ಥ ಶಿಕ್ಷಕ ಪುರಸ್ಕಾರ’ಕ್ಕೆ ಈ ಬಾರಿ ತಾಲೂಕಿನ ಕತಗಾಲ ಗ್ರಾಮದ ಉಪ್ಪಿನ ಪಟ್ಟಣದ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಶ್ಯಾಮಲಾ ಸುಬ್ರಾಯ ಹೆಗಡೆ ಆಯ್ಕೆಯಾಗಿದ್ದಾರೆ.


ಶ್ಯಾಮಲಾ ಹೆಗಡೆಯವರು ಪ್ರತಿಭಾವಂತ ಶಿಕ್ಷಕಿಯಾಗಿದ್ದು ಕಳೆದ ಇಪ್ಪತ್ತೈದು ವರ್ಷಗಳಿಂದ ಸೇವೆಯಲ್ಲಿದ್ದು ಜಿಲ್ಲೆಯ ಶಿರಸಿ ಹಾಗೂ ಕುಮಟಾ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಉಪ್ಪಿನ ಪಟ್ಟಣದ ಪ್ರಾಥಮಿಕ ಶಾಲೆಯಲ್ಲಿ ಸೇವೆಯಲ್ಲಿರುವ ಇವರು ನಾಯಕತ್ವ ತರಬೇತಿ ಶಿಬಿರ, ಶಿಕ್ಷಕರ ಸಹಪಠ್ಯ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ ಮೊದಲಾದ ತರಬೇತಿಯನ್ನು ನೀಡಿ ಮಕ್ಕಳು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿರುತ್ತಾರೆ.

RELATED ARTICLES  ಅಂಕೋಲಾದಲ್ಲಿ ಭಾಷಣ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ


ಇದೇ ಬರುವ ಅಗಸ್ಟ್ 20, ಮಂಗಳವಾರದಂದು ಮಧ್ಯಾಹ್ನ 3 ಗಂಟೆಗೆ ಕೊಂಕಣ ಎಜುಕೇಶನ್ ಟ್ರಸ್ಟ್‍ನ ಸಭಾಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಹೆಸರಾಂತ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀ ಎಚ್.ಎನ್.ಪೈ ಹಳದೀಪುರ ಇವರು ಉದ್ಘಾಟಕರಾಗಿ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

RELATED ARTICLES  ಮುರುಡೇಶ್ವರ ಬೀಚ್ ನಲ್ಲಿ ಅಲೆಯ ರಬಸಕ್ಕೆ ಕೊಚ್ಚಿಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ


ಪ್ರಶಸ್ತಿಯು ನಗದು ಪುರಸ್ಕಾರ ಫಲಕ ಮತ್ತು ಸನ್ಮಾನ ಪತ್ರಗಳನ್ನು ಒಳಗೊಂಡಿದೆ. 2014ನೇ ಇಸವಿಯಿಂದ ಸಂಸ್ಥೆಯು ಆಯೋಜಿಸಿಕೊಂಡು ಬಂದಿರುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಇದುವರೆಗೂ ಶಿಕ್ಷಕರುಗಳಾದ ಡಿ.ಜಿ.ಪಂಡಿತ, ಬಿ.ಎಸ್.ಬಿ. ಗೌಡರ್, ಬೀರಪ್ಪ ಗೌಡ, ವಿಠೋಬ ನಾಯಕ, ಶಿಕ್ಷಕಿ ಸಾಧನಾ ಪೈ ಇವರುಗಳು ಈ ಪುರಸ್ಕಾರವನ್ನು ಪಡೆದಿರುತ್ತಾರೆ. ಯಾವುದೇ ಅರ್ಜಿ ಶಿಫಾರಸ್ಸುಗಳಿಗೆ ಅವಕಾಶಕೊಡದೆ ಸಂಸ್ಥೆವರೇ ಕುಮಟಾ ತಾಲೂಕಿನ ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಈ ಪುರಸ್ಕಾರದ ವಿಶೇಷತೆಯಾಗಿದೆ.