ಬೆಂಗಳೂರು: ಶ್ರೀರಾಘವೇಶ್ವರ ಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣ ಪಾದುಕಾ ಪಟ್ಟಾಭಿಷೇಕದ ಹಂತವನ್ನು ತಲುಪಿದ ಹಿನ್ನೆಲೆಯಲ್ಲಿ ಭಾನುವಾರ (ಆಗಸ್ಟ್ 18) ಶ್ರೀಮಠದ ಶಿಷ್ಯ ಭಕ್ತರು ವಿಶಿಷ್ಟವಾಗಿ ತ್ಯಾಗ ಪರ್ವ ಆಚರಿಸಲಿದ್ದಾರೆ.
ಶ್ರೀರಾಮನಿಗಾಗಿ ರಾಜವಸ್ತ್ರವನ್ನು ತ್ಯಜಿಸಿ ನಾರುಮಡಿಯುಟ್ಟ ಭರತ ಕೂಡಾ ಇಡೀ ಸಮಾಜಕ್ಕೆ ಆದರ್ಶವಾಗಬೇಕು ಎಂಬ ಉದ್ದೇಶದಿಂದ ಈ ವಿಶಿಷ್ಟ ಹಬ್ಬ ಆಚರಿಸಲಾಗುತ್ತಿದೆ ಎಂದು ಶ್ರೀಮಠದ ಧರ್ಮಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಾಮ- ಭರತರ ರಾಜ್ಯತ್ಯಾಗದ ಮಹಾಘಟ್ಟವನ್ನು ತ್ಯಾಗದ ಹಬ್ಬವಾಗಿ ಆಚರಿಸಲಾಗುತ್ತಿದ್ದು, ಶ್ರೀಮಠದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಮಪಾದುಕೆಯನ್ನು ನಿರ್ಮಿಸಿ, ಪಟ್ಟಾಭಿಷೇಕ ನೆರವೇರಿಸಲಾಗುತ್ತದೆ.
ಜೀವನದಲ್ಲಿ ಅಗತ್ಯವಿಲ್ಲದುದನ್ನು ಅಥವಾ ಬದುಕಿಗೆ ಕೆಡುಕಾಗುವಂಥದ್ದನ್ನು ತ್ಯಜಿಸುವ, ಅದರ ಮೌಲ್ಯವನ್ನು ರಾಮಪಾದುಕೆಗೆ ಸಮರ್ಪಿಸುವ ಸಂದರ್ಭವಾಗಿ ಈ ಮಹಾಪರ್ವ ಆಚರಿಸಲಾಗುತ್ತದೆ. ಹೀಗೆ ಸಲ್ಲಿಕೆಯಾದ ಸಂಪನ್ಮೂಲವು ಉದ್ದೇಶಿತ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಬಳಕೆಯಾಗಲಿದೆ.
ಬದುಕಿನ ವ್ಯಸನಗಳನ್ನು ಗುರುಜೋಳಿಗೆಗೆ ಹಾಕಿ, ನಮಗೆ ಬೇಡವಾದ ವಸ್ತುಗಳ ಮೌಲ್ಯವನ್ನು ರಾಮಪಾದುಕೆಗೆ ಸಮರ್ಪಿಸುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳುವ ಸದವಕಾಶ ಈ ತ್ಯಾಗಹಬ್ಬದಂದು ಲಭ್ಯವಾಗಲಿದೆ.
ಪಾದುಕಾ ಪಟ್ಟಾಭಿಷೇಕ
ಬೆಳಿಗ್ಗೆ 9.15ಕ್ಕೆ ಶ್ರೀಗಳಿಂದ ರಾಮಪಾದುಕೆ ಸ್ವೀಕರಿಸಿ, ಸಮಸ್ತ ಶಿಷ್ಯಭಕ್ತರು ಭಜನಾ ರಾಮಾರಣ ಭಜಿಸುತ್ತಾ ಮೆರವಣಿಗೆಯಲ್ಲಿ ಪುನರ್ವಸು ಭವನಕ್ಕೆ ಒಯ್ಯುವರು. ಬಳಿಕ ಪಾದುಕಾ ಪಟ್ಟಾಭಿಷೇಕ ಪೂಜೆ ಆರಂಭವಾಗಲಿದೆ. ಮಧ್ಯಾಹ್ನ 12ಕ್ಕೆ ಶ್ರೀರಾಮ ಪಾದುಕಾಪಟ್ಟಾಭಿಷೇಕ ಹಾಗೂ ಶ್ರೀರಾಮ ಪಾದುಕೆಗೆ ಭಕ್ತಾದಿಗಳಿಂದ ಸುವರ್ಣಾಭಿಷೇಕ, ಪಟ್ಟಾಭಿಷಿಕ್ತ ಶ್ರೀರಾಮನಿಗೆ ಕಪ್ಪ ಕಾಣಿಕೆ ಸಮರ್ಪಿಸಲು ಅವಕಾಶ ಇರುತ್ತದೆ ಎಂದು ಪ್ರಕಟಣೆ ಹೇಳಿದೆ.