1976 ರಲ್ಲಿ ಕುಮಟಾದಲ್ಲಿ ಲಾಯನ್ಸ್ ಕ್ಲಬ್ ಸ್ಥಾಪನೆಯಾದಂದಿನಿಂದ ಇಂದಿನವರೆಗೂ ಬಡವ ಬಲ್ಲಿದನೆಂಬ ಭೇಧಭಾವ ಇಲ್ಲದೇ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅದು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದುದು. ಉಳಿದೆಲ್ಲ ಸಾಮಾಜಿಕ , ಆರೋಗ್ಯ ಸೇವೆಗಳ ಜೊತೆಗೆ ದೇವದೂತ ಶ್ರೀಮತಿ ಹೆಲನ್ ಕೆಲ್ಲರ್‍ರವರ ಹೆಜ್ಜೆ ಗುರುತುಗಳಲ್ಲಿ ನಡೆಯುತ್ತ , ಲಾಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಪ್ರಮುಖ ಧ್ಯೇಯವಾದ ‘ದೃಷ್ಠಿ ಮೊದಲು’ ಈ ಚಟುವಟಿಕೆಯ ಅಡಿಯಲ್ಲಿ ಕಳೆದ 43 ವರ್ಷಗಳಿಂದ ಪ್ರತಿ ವರ್ಷ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬಂದಿರುತ್ತದೆ. ಹಲವು ವರ್ಷಗಳಿಂದ ಉತ್ತರಕನ್ನಡ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಾಯದಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

                ಲಾಯನ್ಸ್ ಕ್ಲಬ್ಬಿನದೇ ಆದ ಸುಸಜ್ಜಿತ ಕಣ್ಣಿನ ಆಸ್ಪತ್ರೆಯೊಂದನ್ನು ಸ್ಥಾಪಿಸಲು ನಿರ್ಣಯಿಸಿದಾಗ ಮಹಾದಾನಿಗಳಾದ ಡಾ.ಗೋಪಾಲ ಸುಬ್ರಾಯ ರೇವಣಕರ ಸಹೋದರರು ಮುಂದೆ ಬಂದರು. ಮೂಲತಃ ಕುಮಟಾ ತಾಲೂಕ ಕಾಗಾಲದವರಾದ ಹಾಲೀ ಅಮೇರಿಕ ನಿವಾಸಿಯಾದ ಡಾ. ಗೋಪಾಲ ರೇವಣಕರ ಹಾಗೂ ಡಾ.ನಾಗೇಶ ರೇವಣಕರ ಮತ್ತು ಭಾರತೀಯ ನಿವಾಸಿಗಳಾದ ಲಾ.ಶ್ರೀನಿವಾಸ ಮತ್ತು ಶ್ರೀ ರಾಮಕೃಷ್ಣ ಸುಬ್ರಾಯ ರೇವಣಕರರವರು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದರು. 2004 ರಲ್ಲಿ ಕರ್ನಾಟಕ ರಾಜ್ಯ ಸರಕಾರದಿಂದ ಭೂಮಿ ಪಡೆದು ಲಾಯನ್ಸ್ ಹ್ಯುಮನಿಟೇರಿಯನ್ ಸರ್ವಿಸ್ ಟ್ರಸ್ಟ್ ರಿ. ಅಡಿಯಲ್ಲಿ ಕುಮಟಾ ಬಗ್ಗೋಣ ರಸ್ತೆಯ ವಿದ್ಯಾಗಿರಿಯಲ್ಲಿ ಕಣ್ಣಿನ ಸರ್ವ ವಿಧವಾದ ಶುಶ್ರೂಷೆಗಾಗಿ ಸುಮಾರು 3240 ಚದರ ಅಡಿ ವಿಸ್ತೀರ್ಣದ 20 ಹಾಸಿಗೆಯ , ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗವಿರುವ , ಎರಡು ಸ್ಪೆಷಲ್ ರೂಮ್‍ನಿಂದ ಕೂಡಿದ ಸಂಪೂರ್ಣ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಮಿನಿ ಬಸ್ ಮೂಲಕ ಸಂಚಾರಿ ವಿಭಾಗ ಕೂಡ ಆರಂಭಗೊಂಡಿತು. ಅದುವೇ ಇಂದು ಜನಮಾನಸದಲ್ಲಿ ಪ್ರಸಿದ್ದಿ ಪಡೆದ ಕುಮಟಾದ ಪ್ರತಿಷ್ಠಿತ   “ಲಾಯನ್ಸ್ ರೇವಣಕರ ಧರ್ಮಾರ್ಥ ಕಣ್ಣಿನ ಆಸ್ಪತ್ರೆ”.

RELATED ARTICLES  ದಂಡಿನ ದುರ್ಗಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ

              2006 ರಲ್ಲಿ ಪ್ರಾರಂಭವಾದ ಈ ಆಸ್ಪತ್ರೆಯಲ್ಲಿ ಇಲ್ಲಿನ ವೈದ್ಯರು ಈವರೆಗೆ ಅಂತೂ 19041 ಕಣ್ಣು ಪೊರೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿರುತ್ತಾರೆ.

              ಪ್ರತಿ ತಿಂಗಳಿನ ಮೊದಲನೇಯ ಗುರುವಾರ , ಮೂರನೇಯ ಗುರುವಾರ ಹಾಗೂ ನಾಲ್ಕನೇಯ ಗುರುವಾರಗಳಂದು ಉಚಿತ ಕಣ್ಣು ತಪಾಸಣಾ ಕ್ಯಾಂಪ್ ಗಳನ್ನು ಕ್ರಮವಾಗಿ ಕುಮಟಾ , ಗೋಕರ್ಣ-ಅಂಕೋಲಾ , ಹೊನ್ನಾವರ-ಭಟ್ಕಳಗಳಲ್ಲಿ ನಡೆಸುತ್ತ ಬಂದಿರುವುದು ಇಲ್ಲಿನ ವಿಶೇಷ ಸಾಧನೆ.ಎರಡನೇ ಗುರುವಾರ ಯಾವುದೇ ಊರಿನಲ್ಲಿ ಪ್ರಾಯೋಜಕತ್ವದಲ್ಲಿ ಉಚಿತ ಕ್ಯಾಂಪ್ ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ.ಈವರೆಗೆ ಸರಿಸುಮಾರು 430 ಉಚಿತ ಕ್ಯಾಂಪ್‍ಗಳನ್ನು ನಡೆಸಿ ಅಂತೂ 6136 ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿ ಅವರು ದೃಷ್ಠಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.

RELATED ARTICLES  ಅಂಕೋಲಾದ ನಿಶಾ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

            ಕಣ್ಣು ತಪಾಸಣಾ ಕ್ಯಾಂಪ್‍ಗಳಲ್ಲಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ಆಂದೇ ಆಸ್ಪತ್ರೆಯ ಸ್ವಂತ ಮಿನಿ ಬಸ್ ಮೂಲಕ ಕುಮಟಾದಲ್ಲಿನ ಆಸ್ಪತ್ರೆಗೆ ಕರೆತಂದು ಮರುದಿನ ಶಸ್ತ್ರಚಿಕಿತ್ಸೆ ನಡೆಸಿ ಆ ಮರುದಿನ ಅವರುಗಳನ್ನು ಕರೆತಂದ ಊರುಗಳಿಗೆ ಬಿಟ್ಟು ಬರಲಾಗುತ್ತದೆ. ಈ ಸಂಚಾರ ವ್ಯವಸ್ಥೆ , ಎರಡು ದಿನಗಳ ವಾಸ್ತವ್ಯ , ಊಟೋಪಚಾರ , ಶಸ್ತ್ರಚಿಕಿತ್ಸೆ ಇವೆಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ.

            ಪ್ರತಿನಿತ್ಯ ಚಿಕಿತ್ಸೆ ಪಡೆಯಲು ಭೇಟಿ ನೀಡುತ್ತಿರುವ ಜಿಲ್ಲೆಯ ಕರಾವಳಿ ಪ್ರದೇಶದ ರೋಗಿಗಳ ಗಣನೀಯ ಏರಿಕೆಯಿಂದಾಗಿ ಆಸ್ಪತ್ರೆಯನ್ನು ವಿಸ್ತರಿಸಲು ನಿರ್ಧರಿಸಿದ್ದು ಅಂದಾಜು 1 ಕೋಟಿ ರೂಪಾಯಿ ವೆಚ್ಚದ ಕಟ್ಟಡ ನಿರ್ಮಾಣ ಯೋಜನೆ ಹಮ್ಮಿಕೊಂಡಿದ್ದು  ಕಾಮಗಾರಿ ಪ್ರಗತಿಯಲ್ಲಿದೆ. ಈ ರೀತಿ ವಿಸ್ತಾರಗೊಂಡಾಗ ಆಸ್ಪತ್ರೆಗೆ ಇನ್ನೂ ಸರಿಸುಮಾರು ರೂಪಾಯಿ 1 ಕೋಟಿ ಮೌಲ್ಯದ ಉಪಕರಣಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ. ದಾನಿಗಳ ಸಹಕಾರದಿಂದ ಆಸ್ಪತ್ರೆಯ ವಿಸ್ತರಣಾ ಕಾರ್ಯ ಮುಗಿದಾಗ ಇದೊಂದು ನಮ್ಮ ಕರಾವಳಿ ಭಾಗದ ಸುಸಜ್ಜಿತ ಆಸ್ಪತ್ರೆಯಾಗಿ ಹೊರಹೊಮ್ಮಲಿದೆ ಎಂಬ ಆಶಾಭಾವನೆಯ ಭರವಸೆಯನ್ನು ಲಾಯನ್ಸ್ ಹ್ಯುಮನಿಟೇರಿಯನ್ ಸರ್ವಿಸ್ ಟ್ರಸ್ಟ್ ಹೊಂದಿದೆ.
ಆಸ್ಪತ್ರೆಯ ದೂರವಾಣಿ ಸಂಖ್ಯೆ :08386-224480