ಕುಮಟಾ: ತಮ್ಮ ತಂದೆ ಡಾ.ಬಿ.ಎ. ಸನದಿ ಹೆಸರಲ್ಲಿ ಅವರ ಜನ್ಮದಿನದಂದು ಕೊಡಮಾಡಿದ ಸನದಿ ಕಾವ್ಯ ಪ್ರಶಸ್ತಿಗೆ ಅಪಾರ ಹರ್ಷ ವ್ಯಕ್ತಪಡಿಸಿ ಮಕ್ಕಳೆಂದರೆ ತುಂಬಾ ಇಷ್ಟಪಡುತಿದ್ದ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸಾಹಿತ್ಯ ಸಂಘವು ಕೈಗೊಳ್ಳುತ್ತಿರುವ ಚಟುವಟಿಕೆಗಳಿಗೆ ತಮ್ಮ ಪೂರ್ಣ ಬೆಂಬಲವಿದೆಯೆಂದು ನಿಸಾರ್ ಸನದಿ ಘೋಷಿಸಿದರು.
ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ಡಾ.ಬಿ.ಎ.ಸನದಿ ಸಾಹಿತ್ಯ ಸಂಘ ಹಾಗೂ ರೋಟರಿ ಕ್ಲಬ್ ಕುಮಟಾ ಆಶ್ರಯದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಸನದಿ ಬುಕ್ ಕಾರ್ನರ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಹಿತ್ಯ ಪ್ರತಿಭೆಗಳು ಮುಖ್ಯವಾಹಿನಿಗೆ ಬರಲು ಇಂತಹ ಪ್ರೋತ್ಸಾಹಕ ಸಂಘಟನೆಗಳು ಜಾಗೃತವಾದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪ್ರೀತಿ ಭಂಡಾರಕರ ಅಭಿಪ್ರಾಯ ಪಟ್ಟರು.
ಸನದಿ ಪ್ರತಿಷ್ಠಾನ ಸ್ಥಾಪಿಸಿ ಆ ಮೂಲಕ ನಿಯತವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆಂದು ರೋಟರಿ ಅಧ್ಯಕ್ಷ ಸುರೇಶ ಭಟ್, ನಿಸಾರ್ ಸನದಿ ಅಭಿಪ್ರಾಯವನ್ನು ಸಮ್ಮತಿಸಿದರಲ್ಲದೇ ತಾನು ಪ್ರಾಥಮಿಕ ಸದಸ್ಯತ್ವ ಪಡೆಯಲು ಸ್ಥಳದಲ್ಲಿಯೇ 5 ಸಾವಿರ ರೂ. ನೀಡಿದರು. ಕವಿ ಸನದಿ ಪತ್ನಿ ನಸಿರಾ ಸನದಿ ಉಪಸ್ಥಿತರಿದ್ದು ಕಾವ್ಯ ಪ್ರಶಸ್ತಿ ಪ್ರದಾನದಲ್ಲಿ ಪಾಲ್ಗೊಂಡು ತಾವು ನೀಡಿದ ಅಮೂಲ್ಯ ಪುಸ್ತಕಗಳು ಮುಂದಿನ ಪೀಳಿಗೆಗೆ ಜ್ಞಾನ ದೀವಿಗೆಯಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸನದಿ ಸಾಹಿತ್ಯ ಸಂಘದ ಅಧ್ಯಕ್ಷ ಎನ್.ಆರ್.ಗಜು ಮುಂದಿನ ವರ್ಷದಿಂದ ಪ್ರಶಸ್ತಿ ಮೊತ್ತವನ್ನು ಹತ್ತು ಸಾವಿರಕ್ಕೆ ಹೆಚ್ಚಿಸುವುದಾಗಿಯೂ ಮತ್ತು ಪ್ರಶಸ್ತಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವುದಾಗಿಯೂ ತಿಳಿಸಿದರು.
ಸನದಿ ಕಾವ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಗೀತಾ ಸಂದಿಗೋಡಮಠ ‘ಯಾವುದೇ ರೀತಿಯ ಪ್ರಾದೇಶಿಕ ಅಸ್ಪ್ರಶ್ಯತೆಯನ್ನು ತೋರದೇ, ನಿಷ್ಪಕ್ಷಪಾತವಾಗಿ ನಿರ್ಣಯಿಸುವ ಆಯ್ಕೆ ಸಮಿತಿಯನ್ನು ಗೌರವಿಸುವೆ. ಇದು ತನ್ನ ವಿದ್ಯಾರ್ಥಿ ಬದುಕಿನ ದೊಡ್ಡ ಹೆಗ್ಗುರುತು. ಮಾನವ್ಯ ಕವಿಯ ಹೆಸರಿನ ಪ್ರಶಸ್ತಿ ತನ್ನ ಸಾಹಿತ್ಯ ಬದುಕಿಗೆ ಮುನ್ನುಡಿಯಾಗುತ್ತದೆ’ ಎಂದರು. ಅಲ್ಲದೇ ಪ್ರಶಸ್ತಿ ಮೊತ್ತವನ್ನು ನೆರೆ ಸಂತ್ರಸ್ಥರ ಪರಿಹಾರಕ್ಕೆ ನೀಡುವಂತೆ ಮರಳಿಸಿದರು.
ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶ್ವೇತಾ ಬೊಮ್ಮಯ್ಯ ನಾಯಕ ಅಚವೆ ಅಂಕೋಲಾ, ಮುಕ್ತಾ ಭಟ್ ಕುಮಟಾ, ಸುಮಾ ಗಜಾನನ ನಾಯ್ಕ ಹಳದೀಪುರ, ಗಾಯತ್ರಿ ಪಟಗಾರ ಕುಮಟಾ, ಸುಮಾ ವಿಶ್ವೇಶ್ವರ ಭಟ್ ಯಲ್ಲಾಪುರ, ಭವ್ಯಾ ಚಂದ್ರಶೇಖರ ಭಟ್ ಕೆಕ್ಕಾರ, ಎಸ್.ಬಿ.ಚಂದನಾ ಹಾನಗಲ್ ಸನದಿ ಕುರಿತಾದ ಸ್ವರಚಿತ ಕವನಗಳನ್ನು ವಾಚಿಸಿ ಸಭಿಕರಿಂದ ಮೆಚ್ಚುಗೆ ಪಡೆದರು. ಹಿರಿಯ ಕವಿ ಬೀರಣ್ಣ ನಾಯಕ ಸನದಿ ಮತ್ತು ತಮ್ಮ ನಡುವಿನ ಒಡನಾಟವನ್ನು ಪ್ರಸ್ತಾಪಿಸಿ ಸನದಿ ಕುರತು ಬರೆದ ಚುಟುಕುಗಳನ್ನು ಸಾದರಪಡಿಸಿದರು.
ಪ್ರಾರಂಭದಲ್ಲಿ ಮುಕ್ತಾ ಭಟ್ ಹಾಗೂ ನಿವೇದಿತಾ ಪಟಗಾರ ‘ಸನದಿ ನಗು’ ಅಂಕೋಲೆಯ ಹಿರಿಯ ಸಾಹಿತಿ ವಿಷ್ಣು ನಾಯ್ಕ ವಿರಚಿತ ಕವನವನ್ನು ವಾಚಿಸುವ ಮೂಲಕ ಚಾಲನೆ ನೀಡಿದರು. ಸನದಿ ಸಾಹಿತ್ಯ ಸಂಘದ ಸಂಚಾಲಕ ಸುರೇಶ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಕಿರಣ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೊಡ್ರಿಗಸ್ ಪ್ರಶಸ್ತಿ ವಿಜೇತೆ ಗೀತಾ ಸಂದಿಗೋಡರಮಠರನ್ನು ಪರಿಚಯಿಸಿದರು. ಶಿಕ್ಷಕ ಪ್ರದೀಪ ನಾಯಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಮಹನೀಯರ ಯಾದಿಯನ್ನು ವಾಚಿಸಿದರು. ಹಿರಿಯ ಶಿಕ್ಷಕ ವಿಷ್ಣು ಭಟ್ಟ ನಿರೂಪಿಸಿದರು. ಜಿಎಸ್‍ಬಿ ಯುವವಾಹಿನಿ ಅಧ್ಯಕ್ಷ ಶಿಕ್ಷಕ ಕಿರಣ ಪ್ರಭು ವಂದಿಸಿದರು.
ಸಮಾರಂಭದಲ್ಲಿ ರೋಟರಿ ಸದಸ್ಯರಾದ ಲಂಬೋದರ ನಾಯ್ಕ, ಡಾ.ದೀಪಕ ನಾಯಕ, ಡಾ.ವನಮಾಲ ಶಾನಭಾಗ, ಸತೀಶ ನಾಯ್ಕ, ಆರ್.ಟಿ.ಹೆಗಡೆ, ಅಕ್ಬರ್ ಮುಲ್ಲಾ, ಚಂದ್ರಶೇಖರ ಉಪಾಧ್ಯಾಯ, ವೆಂಕಟೇಶ ಬೈಲೂರು, ಗಿರೀಶ್ ವನ್ನಳ್ಳಿ ಹಾಗೂ ಸನದಿ ಅಭಿಮಾನಿಗಳು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.