ಕುಮಟಾ : ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾ ಪ್ರಯೋಜನ ಇನ್ನೂ ಬಂದಿಲ್ಲ. ಕಳೆದ ಮೂರು ವರ್ಷದಿಂದ ರೈತರಿಗೆ ಬೆಳೆ ಸಾಲ ಸಿಗಲಿಲ್ಲ. ಸೇವಾ ಸಹಕಾರಿ ಸಂಘ ರೈತರಿಗೆ ಸೌಲಭ್ಯದಿಂದ ವಂಚಿಸುತ್ತಿದೆ. ಅದಲ್ಲದೇ, ಸೇವಾ ಸಹಕಾರಿ ಸಹಕಾರಿಯಾಗಿದೆ ಸಹಕಾರಿಯಾಗಿದೆ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಆಟಗಾರ ಕೆಲವು ಸಂಶಯಾಸ್ಪದ ನಡೆತೆಯ ಕುರಿತು ಆರೋಪಿಸಿ ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯವ್ಯಾಪಿ ಕ್ಷೇತ್ರದ ರೈತರು, ಸದಸ್ಯರು ಸೋಮವಾರ ಸಂಘದ ಕಾರ್ಯ ವೈಖರಿಯ ಬಗ್ಗೆ ಕುಮಟಾದ ಕೆ.ಡಿ.ಸಿ.ಸಿ ಬ್ಯಾಂಕ ಎದುರು ಪ್ರತಿಭಟಿಸಿದರು.
ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘ ಕಳೆದ ೩ ವರ್ಷಗಳಿಂದ ಬೆಳೆಸಾಲ ನೀಡದಿರುವದು ರೈತರಿಗೆ ಸೌಲಭ್ಯ ವಂಚಿತರನ್ನಾಗಿಸಿದೆ. ೨೦೧೭ರಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ೫೦,೦೦೦ ರೂ. ಸಾಲಮನ್ನಾವನ್ನು ಸರ್ಕಾರ ಸಂಪೂರ್ಣವಾಗಿ ನೀಡಿದೆ. ಆದರೆ ಬರಗದ್ದೆ ಸೇವಾ ಸಹಕಾರಿ ಸಂಘ ಇನ್ನೂ ತನ್ನ ಸದಸ್ಯರ ಖಾತೆಗೆ ಸಂಪೂರ್ಣವಾಗಿ ಹಣ ಜಮಾ ಮಾಡಿಲ್ಲ. ಅಲ್ಲದೆ ರೈತರಿಗೆ ಸಾಲ ಚುಕ್ತಾ ಪ್ರಮಾಣ ಪತ್ರ ನೀಡಿಲ್ಲ ಎಂದು ಸೇವಾ ಸಹಕಾರಿ ಸಂಘದ ಕಾರ್ಯದರ್ಶಿಯ ವಿರುದ್ಧ ಜನರು ತೀವ್ರ ವಾಗ್ದಾಳಿ ನಡೆಸಿದರು.
ಕೆಡಿಸಿಸಿ ಬ್ಯಾಂಕ್ ಕುಮಟಾ ಶಾಖೆಯ ಸಿಬ್ಬಂದಿ ಹಾಗೂ ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಇಲ್ಲಿನ ೨೦೦ಕ್ಕೂ ಅಧಿಕ ರೈತರಿಗೆ ವಿತ್‌ಡ್ರಾವಲ್ ಚೆಕ್ಕಿಗೆ ಮೊತ್ತ ನಮೂದಿಸಿದೇ ಸಹಿ ಪಡೆದುಕೊಂಡಿರುವದು ರೈತರ ಪ್ರಮುಖ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಕೆಲವರ ಮನೆಮನೆಗೆ ತೆರಳಿ ಸಹಿ ಪಡೆದುಕೊಂಡಿದ್ದಾರೆ ಎಂಬ ಮಾತೂ ಕೇಳಿಬಂದವು. ಕಾನೂನಾತ್ಮಕವಾಗಿ ಇಂತಹ ಚೆಕ್ಕನ್ನು ಬ್ಯಾಂಕಿಗೆ ತೆರಳಿ ಅಲ್ಲಿಯೇ ಬರೆದು ಕೊಟ್ಟು ಹಣ ಪಡೆಯಬೇಕಾಗುತ್ತದೆ. ಆದರೆ ನಿಯಮ ಉಲ್ಲಂಘಿಸಿ ಬ್ಯಾಂಕ್ ಸಹಕಾರಿ ಸಂಘದ ಕಾರ್ಯದರ್ಶಿ ಮೂಲಕ ಸಹಿ ಪಡೆದುಕೊಂಡಿರುವದು ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಸೇವಾ ಸಹಕಾರಿ ಸಂಘದ ಕಾರ್ಯವೈಖರಿ ಬಗ್ಗೆ ರೈತರು ಸಂಶಯ ವ್ಯಕ್ತ ಪಡಿಸಿದ್ದರಲ್ಲದೇ, ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಯನ್ನೂ ವ್ಯಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರ ರಾಜ್ಯ ಸರ್ಕಾರ ರೈತರ ೧ ಲಕ್ಷದ ವರೆಗಿನ ಸಾಲಮನ್ನಾ ಮಾಡಿದ್ದರು. ಆದರೆ ೩೫ ರಿಂದ ೪೧ ಸಾವಿರ ರೂ. ಸಾಲ ಪಡೆದ ರೈತರ ಖಾತೆಗೂ ೧ ಲಕ್ಷ ರೂ. ಸಾಲಮನ್ನಾ ಮಾಡಿಸಿ ಕಾರ್ಯದರ್ಶಿ ಲಕ್ಷ್ಮಣ್ ಪಟಗಾರ ಅಕ್ರಮ ಎಸಗಿದ್ದಾರೆ. ಅದಲ್ಲದೇ, ಕೆಲವರ ವಿತ್‌ಡ್ರಾವಲ್ ಚೆಕ್ಕಿನ ಮೊತ್ತವನ್ನು ಡ್ರಾ ಮಾಡಲಾಗಿದೆ. ಆದರೆ ರೈತರಿಗೆ ಯಾವ ಮೊತ್ತವನ್ನೂ ನೀಡಿಲ್ಲ ಎಂದು ತಿಳಿದು ಬಂದಿದೆ..