ಈ ಜಗತ್ತಿಗೆ ಯಾರು ಅತ್ಯುತ್ತಮವಾದವುಗಳನ್ನು ಕೊಟ್ಟಿರುವರೋ ಅವರು ಎಲೆ ಮರೆಯ ಕಾಯಿಯಂತೆಯೇ ಇದ್ದು ಹೆಸರಿನ ,ಕೀರ್ತಿಯ ಆಸೆಯಾಗನ್ನಾಗಲೀ ಇಟ್ಟುಕೊಳ್ಳದೆ ಮಾನವಕೋಟಿಗೆ ಉತ್ತಮವಾದುದು ಉಳಿದರೆ ಸಾಕೆಂದು ಆಕಾರವಿಲ್ಲದ ಗಾಳಿ, ಬೆಳಕಿನಂತೆ ಆಗಿ ಹೋಗಿದ್ದಾರೆ.
ಭಾರತೀಯ ಪುರಾತನ ತತ್ತ್ವಶಾಸ್ತ್ರದ ರಚನಕಾರರು, ಪುರಾತನ ಗುಡಿ-ಕೋಟೆಗಳನ್ನು ಕಟ್ಟಿದವರು, ನಾಗರೀಕ ಜೀವನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ಅನೇಕ ಮಹಾಮಹಿಮರುಗಳ ಹೆಸರುಗಳು ನಮಗೆ ದೊರಕುವುದಿಲ್ಲ. ಭಾರತೀಯ ತತ್ತ್ವಶಾಸ್ತ್ರದ ಆಧಾರಸ್ತಂಭಗಳಾದ ವೇದೋಪನಿಷತ್ತುಗಳೂ ಸಹ ಇಂತಹ ಅನೇಕ ಅನಾಮಧೇಯ ದೃಷ್ಟಾರರಿಂದಲೇ ಬೆಳಕಿಗೆ ತೆರೆದುಕೊಂಡಿವೆ. ವೇದ-ವೇದಾಂಗಗಳು ಮಾನವನಿಂದ ರಚಿತವಾದವುಗಳಲ್ಲ (ಅಪೌರುಷೇಯ) ಎಂಬ ವಿಚಾರವಿದ್ದರೂ ಮಾನವಕೋಟಿಗೆ ವೇದೋಪನಿಷತ್ತುಗಳ ಸಾರವನ್ನು ತಿಳಿಸಿಕೊಟ್ಟ ಅನೇಕ ಜ್ಞಾನಿಗಳ-ಗುರುಗಳ ವಿವರಗಳು ತಿಳಿದುಬಂದಿಲ್ಲ. ಸೃಷ್ಟಿಯ ಅನೇಕ ವಿಚಿತ್ರಗಳನ್ನು ವೈವಿಧ್ಯಗಳನ್ನು ಸಾವಿರಾರು ವರುಷಗಳಷ್ಟು ಹಿಂದೆಯೇ ಕಂಡುಕೊಂಡು ಆ ಸತ್ಯಗಳನ್ನು ಉಪನಿಷತ್ತುಗಳ ಮೂಲಕ ತೆರೆದಿಟ್ಟ ಋಷಿಗಳನ್ನು, ಯಂತ್ರಗಳ ಸಹಾಯದಿಂದಲೇ ಬದುಕನ್ನು ಕಟ್ಟಿಕೊಂಡು ಜೀವಿಸುತ್ತಿರುವ ಮಾನವನೊಂದಿಗೆ ಹೋಲಿಸಬಹುದೇ ? . ಜಗತ್ತಿನ ಅತ್ಯಂತ ಬುದ್ಧಿವಂತ ಪ್ರಾಣಿಯಾದ ಮಾನವನು ಅನೇಕ ತಾಂತ್ರಿಕ-ವೈಜ್ಞಾನಿಕ ವಸ್ತು-ವಿಧಾನಗಳನ್ನು ಅನ್ವೇಶಿಸಿಕೊಂಡು ತನ್ನ ಬದುಕನ್ನು ನಾಜೂಕಿನ ಗರಡಿಯೊಳಗೆ ದೂಡಿ ಪಳಗಿ ಹೊರಬಂದು ಸ್ವಾರ್ಥದ ಬದುಕನ್ನು ನೆಡೆಸುತ್ತಿರುವ ಇಂದಿನ ಕಾಲಮಾನದ ಜನಕ್ಕೆ ಉಪನಿಷತ್ತುಗಳ ಸಾರವಾಗಲೀ ಅದರ ಆವಶ್ಯಕತೆಯಾಗಲೀ ಪ್ರಸ್ತುತವಾಗಬಲ್ಲುದೆ ?. ಭಗವದ್ಗೀತೆಯು ಭಾರತೀಯ ತತ್ತ್ವಶಾಸ್ತ್ರದ ಪ್ರಮುಖವಾದ ಮತ್ತು ಪವಿತ್ರವಾದ ಗ್ರಂಥವೆಂದು ಗಣಿಸಲ್ಪಟ್ಟಿದೆ. ಅಲ್ಲಿ ಬರುವ ಧ್ಯಾನ ಶ್ಲೋಕದ ಅರಿತವೊಂದು ಹೀಗಿದೆ, ” ಉಪನಿಷತ್ತುಗಳು ಹಸುಗಳು, ಗೋಪಾಲಕನು ಹಾಲನ್ನು ಕರೆಯುವವನು, ಅರ್ಜುನನು ಕರು, ಗೀತೆಯೇ ಅಮೃತಸಮಾನವಾದ ಹಾಲು, ಜ್ಞಾನಿಗಳು ಅದನ್ನು ಕುಡಿಯುವರು “. ಹೀಗಾಗಿ ಉಪನಿಷತ್ತೇ ಗೀತೆಗೂ ಆಶ್ರಯವಾದುದು ಎನ್ನಬೇಕಾಗುವುದು.
ಇಂದಿನ ಕಾಲಮಾನಕ್ಕೆ ಬಹುತೇಕ ಯುವಜನಾಂಗಕ್ಕೆ ವೇದೋಪನಿಷತ್ತುಗಳ ಸಾರವು ಅಪ್ರಸ್ತುತವೆನಿಸಿದರೂ, ಮಾನವನ ಜೀವನದ ಹುಟ್ಟು-ಸಾವಿನ ಬಗೆಗೆ ವಿಚಾರ ಮಾಡುವ ಸಮಯ ಬಂದಾಗ , ಸೃಷ್ಟಿಯ ಮೂಲವನ್ನು ಹುಡುಕುವ ಆಸೆ ಹುಟ್ಟಿದಾಗ, ಜೀವವಿಕಾಸಕ್ಕೆ ಕಾರಣಗಳನ್ನು ತಿಳಿಯ ಬಯಸುವಾಗ , ವಿಜ್ಞಾನವು ಪ್ರಯೋಗಗಳಿಂದ ಸಿದ್ಧಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎಂದಾಗ ಮತ್ತು ರಕ್ತವು ತಣ್ಣಗಾಗಿ ಬಾಳಿನ ಮುಸ್ಸಂಜೆಯು ಅಪ್ಪಿಕೊಂಡು ಮುಂದೇನು? ಎಂಬ ಗೊಂದಲ ಹುಟ್ಟಿದಾಗ ನೆರವಿಗೆ ಬರುವುದೇ ಉಪನಿಷತ್ತುಗಳು !.
’ತನ್ನ ಅರಿವು ತನಗೆ ಗುರು’ ಎಂಬ ಮಾತು ಎಲ್ಲಾ ಕಾಲಕ್ಕೂ ಹೊಂದುವಂತೆಯೇ , ” ಆತ್ಮವನ್ನರಿಯಲು ಆಧ್ಯಾತ್ಮಿಕ ಗ್ರಂಥವಾಗಲೀ, ಗುರುವಿನ ನುಡಿಗಳಾಗಲೀ ಸಹಾಯಕವಾಗುವುದಿಲ್ಲ. ಅದು ತನಗೆ ತಾನೇ ಒಬ್ಬನ ಅರಿವಿಗೆ ಅನುಗುಣವಾಗಿ ತಿಳಿದುಬರುವಂತಹುದು. ಆದರೂ ಇಂತಹ ಅರಿವನ್ನು ಪಡೆಯಲು ಗ್ರಂಥವೂ , ಗುರುವೂ ಅವಶ್ಯಕ ” ಎಂದು ಯೋಗ ವಾಸಿಷ್ಠ ಸಂಗ್ರಹ ಎಂಬ ಗ್ರಂಥದಲ್ಲಿ ಹೇಳಿದೆ. ಅಂದರೆ, ಗ್ರಂಥಗಳು ಮತ್ತು ಗುರುಗಳು ಆತ್ಮಜ್ಞಾನಕ್ಕೆ ದಾರಿ ತೋರಬಲ್ಲರು.
ಆದರೆ ಒಬ್ಬನು ತನ್ನ ಅರಿವಿನಿಂದ ಮತ್ತು ಧ್ಯಾನಗಳಿಂದ ಆತ್ಮಜ್ಞಾನವನ್ನು ಹೊಂದಬಹುದು ಎಂಬುದು ಮೇಲಿನ ಸೂಕ್ತದ ಉದ್ದೇಶ. ಉಪನಿಷತ್ತುಗಳಿಂದ ತಿಳಿದುಬರುವ ಸಂಗತಿಗಳು ಎಣಿಕೆಗೆ ನಿಲುಕದ್ದು ಮತ್ತು ಒಂದೊಂದು ಸೂಕ್ತಿಗಳ ಮೇಲೂ ನೂರು ಪುಟಗಳ ಹೊತ್ತಗೆಯನ್ನೇ ಬರೆಯಬಹುದಾದಷ್ಟು ವಿಚಾರಗಳು. ಉಪನಿಷತ್ತುಗಳನ್ನೇ ಆಧಾರವಾಗಿರಿಸಿಕೊಂಡು ಅನೇಕ ಆಚಾರ್ಯರು ಹತ್ತು-ಹಲವು ಗ್ರಂಥಗಳನ್ನು ಮಾನವನ ಅರಿವಿಗಾಗಿ , ತಿಳಿವಿಗಾಗಿ ಬರೆದಿಟ್ಟಿದ್ದಾರೆ.
ಅಂತಹ ಅತ್ಯುತ್ತಮ ಗ್ರಂಥಗಳಲ್ಲಿ “ವಿವೇಕ ಚೂಡಾಮಣಿ” ಎಂಬ ಗ್ರಂಥವೂ ಒಂದು. ವಿವೇಕ ಚೂಡಾಮಣಿ ಎಂಬ ಗ್ರಂಥವು ಹಿಂದೂ ಧರ್ಮದ ಪುನರುದ್ಧಾರಕ, ಭಾರತೀಯ ಸಂಸ್ಕೃತಿಗೆ ಮರುಜನ್ಮ ನೀಡಿದ ಮಹಾನ್ ಚೇತನವೆಂದೇ ತಿಳಿಯಲ್ಪಟ್ಟಿರುವ ಶ್ರೀಶಂಕರಾಚಾರ್ಯರಿಂದ ರಚನೆಯಾಗಿರುವುದಾಗಿದೆ. ಮಾನವನು ಹೇಗೆ ಹಾರೆ ಗುದ್ದಲಿಗಳಿಂದ (ಯಂತ್ರಗಳಿಂದ) ನೆಲವನ್ನು ಅಗೆದು ನೀರನ್ನು ಪಡೆಯುತ್ತಾನೋ ಹಾಗೆಯೇ ಗುರುಗಳು ಹೇಳಿರುವ ವಿಚಾರಗಳನ್ನು ಅಧ್ಯಯನ ಮಾಡುವುದರಿಂದ ಉತ್ತಮ ಜ್ಞಾನ-ವಿದ್ಯೆಯನ್ನು ಪಡೆಯಬಹುದು (ಪಡೆಯಬೇಕು).
ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಚ್ಛತಿ |
ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ ||
ಶಂಕರಾಚಾರ್ಯರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯು ಆ ಹೆಸರಿಗೆ ಅನ್ವರ್ಥವಾಗಿಯೇ ಇದೆ ಎಂಬುದು ವಿದ್ವಾಸಂರ ಅಭಿಮತ. ಜ್ಞಾನ ಸಂಪಾದನೆಗೆ ಉತ್ತಮ ಮಾರ್ಗಗಳನ್ನು ಹುಡುಕುತ್ತಾ ಹೋಗುವುದು ವಿವೇಕಿಗಳ ಲಕ್ಷಣವೇ ಆಗಿದೆ. ಅವಿವೇಕತನದಿಂದ ಬೇಡದ ಕೆಲಸಗಳನ್ನು ಮಾಡಿ ನಂತರ ವ್ಯಥೆಪಡುವ ಬದಲು ಒಳ್ಳೆಯ ಅರಿವಿನ ದಾರಿಯಲ್ಲಿ ನೆಡೆಯಲು ಉತ್ತಮ ಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವುದು ಒಳಿತೇ ಆಗಿದೆ.
“ಪ್ರಕ್ಷಾಲನಾದ್ದಿ ಪಂಕಸ್ಯ ದೂರಾದಸ್ಪರ್ಶನಂ ವರಮ್ ” ಅಂದರೆ, “ಕೆಸರನ್ನು ತುಳಿಯುವುದೇಕೆ ? ಆಮೇಲೆ ತೊಳೆಯುವುದೇಕೆ ? ” . ತೊಳೆದರೆ ದೇಹಕ್ಕಂಟಿದ ಕೆಸರು ಹೋಗಬಹುದು ಮನಕ್ಕಂಟಿದ ಕೆಸರು ಹೋಗುವುದೇ ? .
ಇದನ್ನೇ “ದುಷ್ಟರನ್ನು ಕಂಡರೆ ದೂರವಿರು” ಎಂಬ ಮಾತಿನಲ್ಲೂ ಹೇಳಲಾಗಿದೆ.
ಅರಿವಿಗೆ ನೂರೆಂಟು ದಾರಿಯಿದೆ , ನೂರಾರು ಕವಲುಗಳಿವೆ ಗುರಿ ಮಾತ್ರ ಒಂದೇ !.
ಆತ್ಮಾನಂ ರಥಿನಂ ವಿದ್ದಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿಧ್ಧಿ ಮನಃ ಪ್ರಗ್ರಹಮೇವ ಚ ||
(ಕಠೋಪನಿಷತ್ತು)
ಆತ್ಮನೇ ಬಿಲ್ಲಾಳು,
ದೇಹವೇ ತೇರು,
ಬುದ್ಧಿಯೇ ತೇರಾಳು,
ಮನಸೇ ಲಗಾಮು !