ಕುಮಟಾ: ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಕಸ್ತೂರಬಾ ಇಕೋಕ್ಲಬ್ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ವಿಷಯದ ಅದರ ದುಷ್ಪರಿಣಾಮಗಳ ಕುರಿತಾದ ವಿಡಿಯೋ ಸ್ಲೈಡ್ ಶೋ ಪ್ರದರ್ಶಿಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಸಾಮಾಜಿಕ ಕಾರ್ಯಕರ್ತ ಜಿ.ಎಂ.ನದಾಫ ತಂಬಾಕಿನಲ್ಲಿರುವ ರಾಸಾಯನಿಕಗಳು, ಸಿಗರೇಟು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಚಿತ್ರ ಪ್ರದರ್ಶಿಸಿ, ತಂಬಾಕು ಸೇವನೆ ತ್ಯಜಿಸುವುದರಿಂದ ಉಂಟಾಗುವ ಲಾಭಗಳನ್ನು ವಿವರಿಸಿದರು. ಪ್ರತಿನಿತ್ಯ ತಂಬಾಕಿನ ಬಳಕೆಯಿಂದ 2200ಕ್ಕೂ ಹೆಚ್ಚು ಭಾರತೀಯರು ಸಾವಿಗೀಡಾಗುತ್ತಿದ್ದು, ಶೇಕಡಾ 90 ರಷ್ಟು ಬಾಯಿ ಕ್ಯಾನ್ಸರ್ ಗೆ ತಂಬಾಕು ಸೇವನೆ ಕಾರಣವೆಂದು ತಿಳಿಸಿದರು. ಮಾನಸಿಕವಾಗಿ ನಿರ್ಧರಿಸಿ, ಗಟ್ಟಿ ಮನಸ್ಸಿನಿಂದ ಹೇಳಿಸಿ “ಗುಟ್ಕಾ-ತಂಬಾಕು-ಸಿಗರೇಟ” ಮುಟ್ಟುವುದಿಲ್ಲವೆಂದು ಪ್ರಮಾಣ ಮಾಡಿಸಿಕೊಂಡರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಂಕ ಗಳಿಕೆ ಎಷ್ಟೇ ಮಾಡಿದರು, ದುರಭ್ಯಾಸದಿಂದ ಬದುಕು ಬರಡಾಗುತ್ತದೆ. ತಂಬಾಕು ಸೇವನೆ ನಿಮಗಭ್ಯಾಸವಿಲ್ಲ. ಆದರೆ ನಿಮ್ಮ ಮನೆಯಲ್ಲಿ ಹಿರಿಯರ್ಯಾರಾದರೂ ಕಂಡು ಬಂದಲ್ಲಿ ಅದನ್ನು ಖಂಡಿಸಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವೆಂದು ಮನವೊಲಿಸಿ ಮನುಷ್ಯರನ್ನಾಗಿಸಿ ಎಂಬ ಎಚ್ಚರಿಕೆ ಸಂದೇಶ ರವಾನಿಸಿದರು.

RELATED ARTICLES  ಹೆಗಡೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೆಣ್ಣುಮಕ್ಕಳ ಶಾಲೆಗೆ ಸಮಗ್ರ ಪ್ರಶಸ್ತಿ

ಆಶಾ ಕಾರ್ಯಕರ್ತೆ ಅಂಕಿತಾ ನಾಯ್ಕ, ಸಹಾಯಕ ಸಿಬ್ಬಂದಿ ಗುರುಪ್ರಸಾದ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಸ್ತೂರಬಾ ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂಗ್ಲೀಷ ಭಾಷಾ ಸಂಘದ ಸಂಚಾಲಕ ವಿ.ಎನ್.ಭಟ್ಟ ಸ್ವಾಗತಿಸಿದರು. ಇತಿಹಾಸ ಸಂಘದ ಸಂಚಾಲಕ ಪ್ರದೀಪ ನಾಯಕ ವಂದಿಸಿದರು

RELATED ARTICLES  ಚಿನ್ನಾಭರಣ ಹಾಗೂ ನಗದು ದೋಚಿದ ಕಳ್ಳರು..!