ಸರ್ಕಾರ ಬಿಡುಗಡೆ ಮಾಡಿದ ಪರಿಹಾರದ ಹಣ ತಲುಪದ ಕಾರಣ ದಿನ ಬಳಕೆ ವಸ್ತುಗಳಿಗೂ ಹಣವಿಲ್ಲದೆ ಉತ್ತರ ಕನ್ನಡ ಜಿಲ್ಲೆಯ ಸಂತ್ರಸ್ತರು ಪರಿತಪಿಸುತ್ತಿದ್ದಾರೆ.
ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿನ ದಯಾನಂದ್ ಅವರ ಇಡೀ ಮನೆ ಕಾಳಿ ನದಿ ಪ್ರವಾಹಕ್ಕೆ ಕುಸಿದು ಬಿದ್ದಿದೆ. ಮನೆಯಲ್ಲಿರುವ ಆಹಾರ, ಬಟ್ಟೆ, ದಿನಬಳಕೆ ವಸ್ತುಗಳು ಮಣ್ಣು ಪಾಲಾಗಿ ಉಟ್ಟ ಬಟ್ಟೆಯಲ್ಲಿಯೇ ಮನೆ ತೊರೆದು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದರು. ಮನೆಯಲ್ಲಿ ಸುಮಾರು 10 ಲಕ್ಷ ರೂ.ಗಳಷ್ಟು ವಸ್ತುಗಳು ನಾಶವಾಗಿವೆ. ಸರ್ಕಾರ ತುರ್ತು ಪರಿಹಾರದ ಹಣವೆಂದು ತಕ್ಷಣವೇ ನಿರಾಶ್ರಿತರಿಗೆ 10 ಸಾವಿರ ರೂ. ನೀಡುವಂತೆ ಆಯಾ ಭಾಗದ ತಹಶೀಲ್ದಾರರ ಖಾತೆಗೆ ಹಣ ಬಿಡುಗಡೆ ಮಾಡಿದೆ. ಆದರೆ, ತಕ್ಷಣದ ಪರಿಹಾರದ 10 ಸಾವಿರ ರೂ. ಹಣ ಸಹ ಇವರ ಕೈ ಸೇರದೇ ದಾನಿಗಳು ಕೊಟ್ಟ ಆಹಾರ, ಬಟ್ಟೆ ನಂಬಿ ಪರರ ಆಶ್ರಯದಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಇದೆ ಗ್ರಾಮದ ಶಾಂತಬಾಯಿ ಬಾಳು ಕಾಮತ್ ಅವರ ಸ್ಥಿತಿಯೂ ಇದೇ ರೀತಿಯಾಗಿದ್ದು, ವಯೋವೃದ್ಧೆಯಾಗಿರುವ ಶಾಂತಾಬಾಯಿ, ಮಕ್ಕಳನ್ನು ತೊರೆದು ಗೂಡಂಗಡಿ ಇಟ್ಟುಕೊಂಡಿದ್ದರು. ಮಕ್ಕಳ ಆಶ್ರಯ ಇರದಿದ್ದರೂ ಚಿಕ್ಕ ಅಂಗಡಿ ನಡೆಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದರು. ಇವರಿಗೆ ಪ್ರವಾಹ ಬರೆ ಎಳೆದಿದ್ದು, ಮನೆಯಲ್ಲಿದ್ದ ಚಿಕ್ಕಪುಟ್ಟ ಬಂಗಾರದ ಓಲೆಗಳು, ಬಟ್ಟೆ ಬರಿ ಸೇರಿದಂತೆ ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.
ಅಳಿದುಳಿದ ವಸ್ತುಗಳಾದರೂ ಸಿಗಬಹುದು ಎಂಬ ಆಸೆಯಿಂದ ಕುಸಿದ ಮನೆಯ ಮಣ್ಣಿನಲ್ಲಿ ಹೂತ ವಸ್ತುಗಳನ್ನು ಹೆಕ್ಕಿ ತೆಗೆಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇವರ ಮನೆ, ಅಂಗಡಿ ವಸ್ತುಗಳು ಸೇರಿ ಸುಮಾರು 8-10 ಲಕ್ಷ ರೂ. ನಷ್ಟವಾಗಿದೆ. ಆದರೆ ಈ ವರೆಗೆ ಸರ್ಕಾರದಿಂದ ಒಂದು ರೂಪಾಯಿಯೂ ಸಿಕ್ಕಿಲ್ಲ. ತಕ್ಷಣದ ಅಲ್ಪ ಚೇತರಿಕೆಯ ಪರಿಹಾರ ಹಣ ಸಹ ಮರಿಚಿಕೆಯಾಗಿದ್ದು ಈ ವರೆಗೂ ಹಣ ಕೈ ಸೇರಿಲ್ಲ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ನಿಂತರು ಬದುಕಿನ ದುಃಖ ನಿಂತಿಲ್ಲ ಎನ್ನುವಂತಾಗಿದ್ದು, ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿರುವ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಜನತೆ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ.