ಕುಮಟಾ: ಮುಖ್ಯವಾದ ಅಂಗ ಕಣ್ಣಿನ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾದದ್ದು ಅತ್ಯಗತ್ಯ ಎಂದು ಶಿರಸಿಯ ಸುಪ್ರಸಿದ್ಧ ಗಣೇಶ ನೇತ್ರಾಲಯದ ನೇತ್ರ ತಜ್ಞ ಡಾ. ಶಿವರಾಮ ನುಡಿದರು. ಸತ್ತಮೇಲೆ ನಮ್ಮ ಕಣ್ಣುಗಳನ್ನು ದಾನ ಮಾಡುವುದರಿಂದ ಅಂಧಕಾರದಲ್ಲಿರುವವರ ಬಾಳಿನಲ್ಲಿ ಬೆಳಕು ನೀಡಿದ ಪುಣ್ಯ ಲಭಿಸುತ್ತದೆ. ಎಲ್ಲರೂ ಸುಲಭವಾಗಿ ಮಾಡಬಹುದಾದ ದಾನಗಳಲ್ಲಿ ನೇತ್ರದಾನ ಸರ್ವಶ್ರೇಷ್ಠವೆಂದು ಅವರು ಅಭಿಪ್ರಾಯಪಟ್ಟರು. ಅವರು ಇಲ್ಲಿಯ ನಾದಶ್ರೀ ಕಲಾಕೇಂದ್ರದಲ್ಲಿ ಇಂಟರ್ ರೋಟರಿ ಸಮ್ಮೀಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂವಾದಿಸಿದರು. ಕುಮಟಾ ರೋಟರಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಶಿರಸಿ ರೋಟರಿ ಕ್ಲಬ್‍ನ ಪದಾಧಿಕಾರಿಗಳು, ಸದಸ್ಯರು ಆಹ್ವಾನಿಸಲ್ಪಟ್ಟಿದ್ದರು.
ರೋಟರಿ ಪ್ರಮುಖ ಯೋಜನೆಗಳ ಕುರಿತು ವಿಸ್ತ್ರತ ಮಾಹಿತಿ ಕೇಂದ್ರೀಕರಿಸಲಾಯಿತು. ಸ್ವಸಿದ್ಧಪಡಿಸಿದ ವಿಡಿಯೋ ಕ್ಲಿಪಿಂಗ್ ನೆರವಿನಿಂದ ಕ್ಲಿಷ್ಠ ಯೋಜನೆಗಳನ್ನು ಪರಿಣಾಮಕಾರಿಯಾಗಿ ವರ್ಣಿಸಲಾಯಿತು. ರೊ. ಪ್ರವೀಣ ಕಾಮತ ರೋಟರಿ ಗ್ಲೋಬಲ್ ಗ್ರ್ಯಾಂಟ್ ಬಗ್ಗೆ ಸಂಪೂರ್ಣ ವಿವರ ಒದಗಿಸಿದರು. ರೊ. ಅರುಣ ನಾಯಕ ಅನೇಕ ಹೊಸ ಹೊಸ ಯೋಜನೆಗಳನ್ನು ಪ್ರಸ್ತುತ ಪಡಿಸಿದ್ದಲ್ಲದೇ ಜಲಾಮೃತ ಯೋಜನೆಗೆ ಪೂರಕವಾದ ಇಂಗು ಗುಂಡಿ ನಿರ್ಮಾಣದ ಕುರಿತು ಪ್ರತಿಯೊಬ್ಬರೂ ಜೀವಜಲ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು. ಹೊಸ ಯೋಜನೆಗೆ ನೆರವಾಗುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ರೋಟರಿ ಮಾಸಪತ್ರಿಕೆ ರೊಟೋಲೈಟ್ ಬಿಡುಗಡೆಗೊಳಿಸಲಾಯಿತು ಹಾಗೂ ಏನ್ಸ್ ಕ್ಲಬ್ ಸಂಘಟಿಸಿದ ವಿಶೇಷ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಥಮವಾಗಿ ರೊ. ಗಜಾನನ ಕಾಮತ ರೋಟರಿ ಧ್ಯೇಯವಾಕ್ಯ ವಾಚಿಸಿದರು. ಅಸಿಸ್ಟಂಟ್ ಗವರ್ನರ್ ರೊ.ಜಿ.ಎಸ್.ಹೆಗಡೆ ಕುಮಟಾ ರೋಟರಿ ಬೆಳೆದು ಬಂದ ಕುರಿತು ಮಾತನಾಡಿದರು. ಅಧ್ಯಕ್ಷ ರೊ. ಸುರೇಶ ಭಟ್ ಸ್ವಾಗತಿಸಿ ಬರಮಾಡಿಕೊಂಡರು. ಕಾರ್ಯದರ್ಶಿ ರೊ.ಕಿರಣ ನಾಯಕ ವಾರದ ಕಾರ್ಯಕ್ರಮಗಳ ಹಿನ್ನೋಟ ಹಾಗೂ ಮುನ್ನೋಟವನ್ನು ಮುಂದಿಟ್ಟು, ಕೊನೆಯಲ್ಲಿ ವಂದಿಸಿದರು. ರೋಟೇರಿಯನ್‍ರಾದ ಜೈವಿಠ್ಠಲ ಕುಬಾಲ, ಎನ್.ಆರ್.ಗಜು, ನಿರ್ಮಲಾ ಪ್ರಭು, ದೀಪಾ ನಾಯಕ ನಿರ್ವಹಿಸಿದರು.