ಬೆಂಗಳೂರು : ಅತಿಥಿ ಎಂದರೆ ಕಾಲವನ್ನು ನೋಡದೆ ಬರುವವನು. ಪರಿಚಯವಿಲ್ಲದ, ಮನೆಗೆ ಬರುವವರನ್ನು ಜಾತಿ, ಮತ, ಪಥಗಳನ್ನು ಲೆಕ್ಕಿಸದೆ, ಅಂತಹವರನ್ನು ಸತ್ಕರಿಸುವ ಚಿಂತನೆ ಪ್ರಾಚೀನಭಾರತೀಯರದ್ದಾಗಿತ್ತು ಎಂದು ಚಿಂತಕ, ಸಂಸ್ಕೃತ ವಿದ್ವಾಂಸ ವಿದ್ವಾನ್ ಕೃಷ್ಣರಾಜ ಕುತುಪ್ಪಾಡಿ ಹೇಳಿದರು.

ಅವರು ಉತ್ತರಹಳ್ಳಿಯ ಸಾಧನಾ ಪಿಯು ಕಾಲೇಜಿನಲ್ಲಿ ನಡೆದ ಸಂಸ್ಕೃತೋತ್ಸವದಲ್ಲಿ ‘ಅತಿಥಿ ದೇವೋ ಭವ’ ಎನ್ನುವ ವಿಷಯವನ್ನು ಕುರಿತು ಮಾತನಾಡಿದರು.

ತಂದೆ, ತಾಯಿ, ಗುರುಗಳ ಅನಂತರ ಸ್ಥಾನವನ್ನು ಸಂಸ್ಕೃತಿ ಅತಿಥಿಗೆ ಕೊಟ್ಟಿದೆ. ನಮ್ಮ ಪರಿಚಯದ ಆತ್ಮೀಯರನ್ನು ಮಾತ್ರ ಗೌರವಿಸದೆ, ಎಲ್ಲರಿನ್ನು ಸತ್ಕರಿಸುವ ಚಿಂತನೆ ನಮ್ಮ ಋಷಿಗಳದ್ದಾಗಿತ್ತು. ಹಸಿವಿನಿಂದ ಬರುವವರನ್ನು ಕರೆದು ಊಟ ಹಾಕಿದಾಗ ಅವರು ತೃಪ್ತಿಯಾಗಿ ಹರಸಿದಾಗ ಆಗುವ ತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ನುಡಿದರು.

ಬಾವಿಯಲ್ಲಿ ಕೊಡವನ್ನು ಇಳಿ ಬಿಟ್ಟಾಗ, ಅದು ಬಾಗಿದರೆ ಮಾತ್ರ ಒಳಗೆ ನೀರು ತುಂಬುತ್ತದೆ. ಅಂತೆಯೇ ನಾವು ಹಿರಿಯರ ನಡುವೆ ಬಾಗಿದಾಗ ಮಾತ್ರ ನಮ್ಮಲ್ಲಿ ಜ್ಞಾನ ತುಂಬಲು ಸಾಧ್ಯ ಎಂದರು.

RELATED ARTICLES  ಪ್ರೀತಿಯ ಪ್ರಧಾನಿಗೊಂದು ಬಹಿರಂಗ ಪತ್ರ.

ವಿಶ್ವವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ‌ ವಸಂತ ನಾಡಿಗೇರ್ ಮಾತನಾಡಿ, ಸಂಸ್ಕೃತ ವಿಶೇಷವಾದ ಭಾಷೆ. ಅಷ್ಟು ಹಳೆಯದಾದರೂ, ಕಂಪ್ಯೂಟರ್ ಲಾಂಗ್ವೇಜ್ ಆಗಿ ಬಳಸಲು ಯೋಗ್ಯವಾದ ಭಾಷೆ ಸಂಸ್ಕೃತ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಸಂಸ್ಕೃತದ ಹಿರಿಮೆ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿರುವ ಅನೇಕ ಸಂಘ-ಸಂಸ್ಥೆಗಳು ತಮ್ಮ ಘೋಷವಾಕ್ಯವಾಗಿ ಸಂಸ್ಕೃತವನ್ನೇ ಬಳಸಿವೆ. ಸಂಸ್ಕೃತದಲ್ಲಿ ಇರುವ ಜ್ಞಾನವನ್ನು ಅರಿಯಲು ಆ ಭಾಷೆಯನ್ನು ಕಲಿಯಬೇಕಾಗುತ್ತದೆ. ಸಂಸ್ಕೃತವನ್ನು ಉಳಿಸಬೇಕು ಹಾಕು ಬೆಳೆಸಬೇಕು ಎಂದು ಕರೆ ಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಸಿರಾಜ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಪ್ರಾಧ್ಯಾಪಕ ಕೃಷ್ಣಾನಂದ ಶರ್ಮಾ ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿನಿ ಸಂಜನಾ ಸ್ವಾಗತಿಸಿದರೆ, ಸ್ನೇಹಾ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿನಿಯರಾದ ಆರ್ಯಾ ನಂದಿ ಮತ್ತು ಹರಿಪ್ರಿಯಾ ನಿರೂಪಿಸಿದರು. ಜಾಹ್ನವೀ ಮತ್ತು ಗಾನವೀ ಸ್ವಾಗತನೃತ್ಯದ ಮೂಲಕ ಅಭ್ಯಾಗತರನ್ನು ಬರಮಾಡಿಕೊಂಡರು.
ಉಪ ಪ್ರಾಂಶುಪಾಲ ಸುರೇಶ್ ಕುಮಾರ್, ಕನ್ನಡ ವಿಭಾಗಾಧ್ಯಕ್ಷ ವೆಂಕಟೇಶ್, ಕಾಮರ್ಸ್ ವಿಭಾಗಾಧ್ಯಕ್ಷೆ ಸೌಮ್ಯಾ, ಬೀನಾ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಬೆಂಗಳೂರು ಕವಿವೃಕ್ಷ ಬಳಗದಿಂದ ರಾಜ್ಯಮಟ್ಟದ ಕವಿಗೋಷ್ಠಿ : ಅನಾವರಣಗೊಂದ ಎನ್ ಮುರಳೀಧರ ಅವರ ಕೃತಿ.


ಅತಿಥಿ ದೇವೋ ಭವ ಎನ್ನುವ ಥೀಮ್ ಲಿ ನಡೆದ ಸಂಸ್ಕೃತೋತ್ಸವದಲ್ಲಿ, ಮನೆಗೆ ಬರುವ ಅತಿಥಿಗಳನ್ನು ಹೇಗೆ ಬರಮಾಡಿಕೊಳ್ಳಬೇಕು ಹಾಗೂ ಹೇಗೆ ಬರಮಾಡಿಕೊಳ್ಳಬಾರದು ಎಂಬುದನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ತೋರಿಸಿದರು. ದೇವ ಕೃಷ್ಣನಿಂದ ಆರಂಭಿಸಿ ಅನಕೃ ಮುಂತಾದ ಹಿರಿಯರು ಹೇಗೆ ಆತಿಥ್ಯ ಮಾಡುತ್ತಿದ್ದರು ಎನ್ನುವ ಕಥೆಗಳನ್ನು ಹೇಳಿ, ಆತಿಥ್ಯದ ಪ್ರಾಮುಖ್ಯವನ್ನು ವಿವರಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
ಅಭ್ಯಾಗತರನ್ನು ಸಂಪ್ರದಾಯ ಬದ್ಧವಾಗಿ ಸ್ವಾಗತಿಸಿ, ಬೀಳ್ಕೊಡಲಾಯಿತು.

ಬಾವಿಯಲ್ಲಿ ಕೊಡವನ್ನು ಇಳಿ ಬಿಟ್ಟಾಗ, ಅದು ಬಾಗಿದರೆ ಮಾತ್ರ ಒಳಗೆ ನೀರು ತುಂಬುತ್ತದೆ. ಅಂತೆಯೇ ನಾವು ಹಿರಿಯರ ನಡುವೆ ಬಾಗಿದಾಗ ಮಾತ್ರ ನಮ್ಮಲ್ಲಿ ಜ್ಞಾನ ತುಂಬಲು ಸಾಧ್ಯ

  • ವಿದ್ವಾನ್ ಕೃಷ್ಣರಾಜ ಕುತುಪ್ಪಾಡಿ