ಕಾಸರಗೋಡು:ಕೇರಳ ಸರಕಾದ ಕಡ್ಡಾಯ ಮಲಯಾಳ ಹೇರಿಕೆ ವಿರೋಧಿಸಿ ಜಾತಿ, ಮತ, ಧರ್ಮ, ರಾಜಕೀಯ ಪಕ್ಷಗಳ ಭೇದವಿಲ್ಲದೆ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬೃಹತ್ ದಿಗ್ಬಂಧನ ಚಳವಳಿ ನಡೆಸಲಾಗುತ್ತಿದೆ.
ಕನ್ನಡ ತಾಯಿಯ ಮಕ್ಕಳು ಎಂಬ ಉದ್ದೇಶವನ್ನು ಇಟ್ಟುಕೊಂಡು ಸಾವಿರಾರು ಜನರು ಬೀದಿಗಳಿದಿದ್ದು ಕನ್ನಡ ಪರ ಘೋಷಣೆಗಳು ಮೊಳಗಿವೆ.
ನೆಲ ಮತ್ತು ಭಾಷೆ – ಸಂಸ್ಕೃತಿಯನ್ನು ಕಳೆದುಕೊಳ್ಳಬೇಕಾದ ಪ್ರಸಂಗ ಎದುರಾದ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯ ಇತಿಹಾಸದಲ್ಲಿಯೇ ಅಭೂತಪೂರ್ವ ಹಾಗೂ ಅತ್ಯಂತ ಪ್ರಾಮುಖ್ಯವಾದ ಆಂದೋಲನವನ್ನು ಗಡಿನಾಡು ಕನ್ನಡಿಗರು ನಡೆಸುತ್ತಿದ್ದಾರೆ.
ಕನ್ನಡ ಆಂದೋಲನಕ್ಕೆ ನಾಡಿನ ವಿವಿಧ ಸಂಘ – ಸಂಸ್ಥೆಗಳು ಹಾಗೂ ಕನ್ನಡ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.
ಸಹಸ್ರಾರು ಮಂದಿ ಆಗಮಿಸಿರುವ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ. ನಾವು ಯಾರ ವಿರುದ್ಧವೂ ಈ ಚಳವಳಿ ಮಾಡುತ್ತಿಲ್ಲ, ಬದಲಾಗಿ ನ್ಯಾಯಕ್ಕಾಗಿ ನಮ್ಮ ಹೋರಾಟವಾಗಿದ್ದು, ಆದ್ದರಿಂದ ಅನಗತ್ಯ ಘೋಷಣೆಗಳಿಗೆ ಆಸ್ಪದವಿಲ್ಲ ಎಂದು ಹೋರಾಟ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ವಾಹನಗಳನ್ನು ವಿದ್ಯಾನಗರ ಮೈದಾನ ಪರಿಸರದಲ್ಲಿ ನಿಲುಗಡೆಗೊಳಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.