ಕುಮಟಾ: ಚುನಾವಣಾ ಆಯೋಗದ ನಿರ್ದೇಶನದಂತೆ ಸೆಪ್ಟೆಂಬರ್ ೧ ರಿಂದ ೩೦ ರವರೆಗೆ ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-೨೦೨೦ ಅಭಿಯಾನ ಆರಂಭಗೊಂಡಿದೆ ಎಂದು ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದರು.

ಅವರು ತಹಸೀಲ್ದಾರ್ ಕಾರ್ಯಾಲಯದಲ್ಲಿ ಭಾನುವಾರ ಮತದಾರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನಿಂದ ಒಂದು ತಿಂಗಳ ಕಾಲ ಬಿಎಲ್​ಓಗಳು ಮನೆಮನೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆ, ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದು ಪಡಿ ಕಾರ್ಯವನ್ನು ಮಾಡಲಿದ್ದಾರೆ. ಬಿಎಲ್​ಓಗಳು ಮನೆ ಭೇಟಿ ಮಾಡಿರುವುದನ್ನು ಜಿಪಿಎಸ್ ಟ್ಯಾಗಿಂಗ್ ಮೂಲಕ ಖಚಿತಪಡಿಸಲಾಗುತ್ತಿದೆ. ನಾಗರಿಕರಿಗೆ ಇದೊಂದು ಸುವರ್ಣಾವಕಾಶ ಎಂದರು.
ತಹಸೀಲ್ದಾರ್ ಮೇಘರಾಜ ನಾಯ್ಕ ಮಾತನಾಡಿ, ೨೦೨೦ ರೊಳಗೆ ಮತದಾರ ಪಟ್ಟಿ ಹಾಗೂ ಮತಗಟ್ಟೆ ಸಂಪೂರ್ಣವಾಗಿ ಲೋಪದೋಷ ರಹಿತಗೊಳಿಸುವುದು ಅಭಿಯಾನದ ಮುಖ್ಯ ಉದ್ದೇಶ. ಮತದಾರರು ಸ್ವತಃ ತಮ್ಮ ಮಾಹಿತಿಯು ಸರಿಯಾಗಿರುವದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

RELATED ARTICLES  ತಾರೀಬಾಗಿಲಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ.

ಅರ್ಜಿ ನಮೂನೆ ೮ ರಲ್ಲಿ ತಿದ್ದುಪಡಿ, ನಮೂನೆ ೭ ರಲ್ಲಿ ಸ್ಥಳ ಬದಲಾವಣೆ ಹಾಗೂ ನಮೂನೆ ೬ ರಲ್ಲಿ ಸೇರ್ಪಡೆಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಬಿಎಲ್​ಓಗಳ ಮನೆಮನೆ ಭೇಟಿಯ ಹೊರತಾಗಿಯೂ ಸಾಮಾನ್ಯ ಸೇವಾ ಕೇಂದ್ರ, ಮತದಾರರ ಪೂರಕ ಕೇಂದ್ರ, ಕರ್ನಾಟಕ ಒನ್/ಬೆಂಗಳೂರು ಒನ್, ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಬಹುದು, ಕುಮಟಾದಲ್ಲಿ ೯ ಸಿಎಸ್​ಸಿ ಕೇಂದ್ರಗಳಲ್ಲೂ ಮತಪಟ್ಟಿ ಪರಿಷ್ಕರಣೆಗೆ ಅವಕಾಶವಿದೆ. ಹೆಚ್ಚುವರಿಯಾಗಿ ನವೆಂಬರ್ ೨, ೩, ೯ ಹಾಗೂ ೧೦ ರಂದು ಕೂಡಾ ಮತದಾರ ಪಟ್ಟಿ ಪರಿಷ್ಕರಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದರು.

RELATED ARTICLES  ಉತ್ತರಕನ್ನಡದಲ್ಲಿ ಮುಂದುವರೆದ ಕೊರೋನಾ ಆರ್ಭಟ : ಇಂದು ೩ ಜನ ಕೊರೋನಾಕ್ಕೆ ಬಲಿ

ಜಿಪಂ ಎಇ ರಾಮದಾಸ ಗುನಗಿ, ಲೋಕೋಪಯೋಗಿ ಎಇ ರಾಜು ಶಾನಭಾಗ, ಕಿರಣ ಚೇಳಕರ, ಪಿಎಸ್​ಐ ಸಂಪತ್​ಕುಮಾರ ಇನ್ನಿತರರು ಇದ್ದರು. ಉಪತಹಸೀಲ್ದಾರ್ ಯಶೋದಾ ಹೊಸ್ಕಟ್ಟಾ ಸ್ವಾಗತಿಸಿ ನಿರ್ವಹಿಸಿದರು.