ಕುಮಟಾ : ತಾಲೂಕಿನ ವಾಲಗಳ್ಳಿ ಪಂಚಾಯಿತಿ ವ್ಯಾಪ್ತಿಯ ವ್ಯಕ್ತಿಯೊಬ್ಬರು ತಮ್ಮ ಪ್ರಬಲ ಇಚ್ಚಾಶಕ್ತಿ ಹಾಗೂ ಸೇವಾ ಕಾಯಕದಿಂದ ಗಮನಸೆಳೆಯುತ್ತಿದ್ದಾರೆ. ಕೂಲಿನಾಲಿ ಮಾಡಿ ಬದುಕುವ ಇವರು ಪ್ರತಿನಿತ್ಯ ಕೆಲ ತಾಸು ಸ್ವಯಂ ಪ್ರೇರಣೆಯಿಂದ ರಸ್ತೆಯ ಹೊಂಡ ಮುಚ್ಚುವ ಶ್ರಮಮಾಡಿ ಇತರರಿಗೆ ಪ್ರೇರಣೆಯಾಗಿದ್ದಾರೆ.
ಹಾರೋಡಿ ಗ್ರಾಮದ ಪರಮೇಶ್ವರ ತಿಮ್ಮಪ್ಪ ಗೌಡರು ಕಳೆದ ಹಲವಾರು ವರ್ಷಗಳಿಂದ ರಸ್ತೆಯ ಹೊಂಡವನ್ನು ಸ್ವತಃ ಗುದ್ದಲಿ ಹಿಡಿದು ಕಲ್ಲುಮಣ್ಣು ಹಾಕಿ ಮುಚ್ಚುತ್ತಿದ್ದಾರೆ. ಇದಕ್ಕಾಗಿ ಯಾರಿಂದಲೂ ಹಣ ಪಡೆದಿಲ್ಲ. ಸುಮ್ಮನೆ ಸಮಯ ವ್ಯರ್ಥ ಮಾಡದೇ, ಎಲ್ಲದಕ್ಕೂ ಬೇರೆಯವರ ಕಡೆಗೆ ಬೊಟ್ಟು ಮಾಡುವ ಬದಲು ಸ್ವತಃ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಮುಂದಾಗಬೇಕು ಎಂಬ ಧ್ಯೇಯ ೫೦ ರ ಹರೆಯದ ಪರಮೇಶ್ವರ ಗೌಡರದ್ದು.
ಈ ಬಗ್ಗೆ ಅನಿಸಿಕೆ ಹಂಚಿಕೊಂಡ ಪರಮೇಶ್ವರ ಗೌಡರು, “ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಹೊಂಡ ಮುಚ್ಚುವ ಕೆಲಸ ಮಾಡುತ್ತಿದ್ದೇನೆ. ಹೆರವಟ್ಟಾ ರೈಲ್ವೆ ಬ್ರಿಜ್ನಿಂದ ಕೂಜಳ್ಳಿ ಶಾಲೆ ಬಳಿಯ ಬಾಬನವರ ಅಂಗಡಿವರೆಗೆ ಹೊಂಡ ಮುಚ್ಚುತ್ತೇನೆ. ಮಳೆ ಇರುವಾಗ ಕೆಲಸ ಆಗುವುದಿಲ್ಲ. ಬಿಸಿಲು ಬಿದ್ದು ಹೊಂಡಗಳು ಒಣಗಿದಾಗ ಮುಚ್ಚುವುದು ಸರಳವಾಗುತ್ತದೆ. ಈ ಕೆಲಸಕ್ಕೆ ಯಾರಿಂದಲೂ ಏನೂ ಪಡೆದಿಲ್ಲ ಮತ್ತು ಪಡೆಯುವ ಅಪೇಕ್ಷೆಯೂ ಇಲ್ಲ. ಯಾವುದೋ ಇಲಾಖೆ ನನಗೆ ಹಣ ಕೊಡುತ್ತಿದೆ ಎಂದು ಜನ ತಪ್ಪಾಗಿ ಭಾವಿಸಿದ್ದಾರೆ. ಯಾರೂ ಹಣ ಕೊಡುತ್ತಿಲ್ಲ. ಚಾ ಕುಡಿ ಎಂದು ಯಾರೂ ನಯಾಪೈಸೆ ಕೊಟ್ಟಿದ್ದಿಲ್ಲ. ಇದನ್ನು ದೇವರ ಸೇವೆ, ಜನಸೇವೆ ಎಂದು ಮಾಡುತ್ತಿದ್ದೇನೆ.
ನಂದೂ ಚಿಕ್ಕ ಗಾಡಿ ಇದೆ. ರಸ್ತೆಯ ಹೊಂಡದ ಸಮಸ್ಯೆ ಗೊತ್ತಿದೆ. ಕೆಲವರು ಖಾಲಿ ಇದ್ದಾಗ ಅಲ್ಲಿ-ಇಲ್ಲಿ ಟೈಂಪಾಸ್ ಮಾಡುತ್ತಾರೆ. ಎಲ್ಲರೂ ಸೇವೆ ಎಂದು ದಿನಕ್ಕೆ ಒಂದು ಹತ್ತು ಹೊಂಡ ಮುಚ್ಚಿದರೂ ಸಾಕು. ಎಲ್ಲಾ ರಸ್ತೆಗಳೂ ಸಪಾಟಾಗಿರುತ್ತಿತ್ತು. ನಾನು ಬೆಳಿಗ್ಗೆ ಒಂದು ಹೊರೆ ಸೊಪ್ಪು, ಒಂದು ಹೊರೆ ಹುಲ್ಲು ಮನೆಗೆ ತಂದು ೧೧ ಗಂಟೆ ನಂತರ ಈ ರಸ್ತೆ ಹೊಂಡ ಮುಚ್ಚುವ ಕೆಲಸ ಮಾಡುತ್ತೇನೆ. ಮಧ್ಯಾಹ್ನ ಊಟ ಮಾಡಿ ೩ ಗಂಟೆ ಬಳಿಕ ಮತ್ತೆ ಕೆಲಸ ಮಾಡಿ ಮನೆಗೆ ಮರಳುತ್ತೇನೆ. ಸಂಜೆ ೫ ಗಂಟೆ ಬಳಿಕ ಪುನಃ ಒಂದು ತಾಸು ಹೊಂಡಗಳನ್ನು ಮುಚ್ಚುತ್ತೇನೆ. ಹರಟೆ-ವಿಶ್ರಾಂತಿಯೆಲ್ಲವೂ ನಂತರ” ಎಂದು ಹೇಳಿದ್ದಾರೆ.
ಎಲ್ಲವೂ ಹಣಕ್ಕಾಗಲ್ಲ. ಬದುಕಿನ ಕೆಲಭಾಗ ಸೇವೆಗಾಗಿಯೂ ಮೀಸಲಿರಬೇಕು ಎಂಬ ಮಹತ್ವದ ವಿಚಾರವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಹಾರೋಡಿ ಪರಮೇಶ್ವರ ಗೌಡರು ತಮ್ಮ ಕಾಯಕದಿಂದ ಇತರರಿಗಿಂತ ವಿಶಿಷ್ಟ ಮತ್ತು ವಿಭಿನ್ನವಾಗಿದ್ದಾರೆ.