ಭಟ್ಕಳ: ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಮೂವತ್ತೈದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ಎಂ.ಕೆ.ನಾಯ್ಕ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಶಾಲೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಸ್ಥೆಯ ಪರವಾಗಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ ಮಾತನಾಡಿ ಎಂ.ಕೆ.ನಾಯ್ಕ ಅವರ ಸರಳತೆ ಮತ್ತು ಪ್ರಾಮಾಣಿಕ ವ್ಯಕ್ತಿತ್ವದ ಕುರಿತು ಶ್ಲಾಘಿಸಿದರಲ್ಲದೇ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ವೃತ್ತಿಯೆಡೆಗಿನ ಬದ್ಧತೆಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರ ನಿವೃತ್ತ ಜೀವನಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಎಂ.ಕೆ.ನಾಯ್ಕ ಅವರಿಗೆ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನರಸಿಂಹ ಮೂರ್ತಿ ಶಾಲು ಹೊದಿಸಿ ಸನ್ಮಾನಿಸಿ ಬಿ.ಎಡ್.ಕಾಲೇಜಿನ ಬೋಧನಾಭ್ಯಾಸದ ಕಾರ್ಯಗಳಿಗೆ ಎಮ್.ಕೆ.ನಾಯ್ಕವರ ಸಹಕಾರವನ್ನು ನೆನೆದರಲ್ಲದೇ ಅವರ ಸೌಜನ್ಯಯುತ ವ್ಯಕ್ತಿತ್ವದ ಗುಣವನ್ನು ಶ್ಲಾಘಿಸಿದರು..

ಇದೇ ಸಂದರ್ಭದಲ್ಲಿ ವಿಜಯಾಬ್ಯಾಂಕ್ ನ ನಿವೃತ್ತ ಚೀಫ್ ಮ್ಯಾನೇಜರ್ ಎಂ.ಆರ್.ನಾಯ್ಕ ಅವರೂ ಕೂಡ ಎಮ್.ಕೆ.ನಾಯ್ಕ ಅವರನ್ನು ಸನ್ಮಾನಿಸಿ ಅವರ ವ್ಯಕ್ತಿತ್ವದ ಕುರಿತು ಪ್ರಶಂಸೆಯ ನುಡಿಗಳನ್ನಾಡಿ ನಿವೃತ್ತ ಜೀವನಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿವೃಂದದ ಪರವಾಗಿ ಕಸಾಪ ತಾಲೂಕಾಧ್ಯಕ್ಷ,ಉಪನ್ಯಾಸಕ ಗಂಗಾಧರ ನಾಯ್ಕ, ಪಾಂಡುರಂಗ ನಾಯ್ಕ, ಮನಮೋಹನ ನಾಯ್ಕ, ಫ್ರೆಂಡ್ಸ ಜಿಮ್‍ನ ವೆಂಕಟೇಶ ನಾಯ್ಕ, ಶ್ರೀಧರ ನಾಯ್ಕ ಮುಂತಾದವರು ಎಮ್.ಕೆ.ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಕವನ ವಾಚನದ ಮೂಲಕ ಎಮ್.ಕೆ.ನಾಯ್ಕ ಅವರಿಗೆ ಶುಭಕೋರಿದರು. ಶಾಲೆಯ ಪ್ರಭಾರ ಮುಖ್ಯಾಧ್ಯಾಪಕ ಗಣಪತಿ ಶಿರೂರು, ಶಿಕ್ಷಕರಾದ ಎಸ್.ಎಚ್.ಗೌಡ ಹಾಗೂ ರವಿರಾಜ ಚೌಕಿಮನೆ ಎಮ್.ಕೆ.ನಾಯ್ಕ ಅವರೊಂದಿಗಿನ ವೃತ್ತಿ ಜೀವನದ ಒಡನಾಟದ ಕ್ಷಣಗಳ ಕುರಿತು ಮಾತನಾಡಿ ಅವರ ವ್ಯಕ್ತಿತ್ವದ ಗುಣಗಳು ತಮ್ಮ ವೃತ್ತಿಜೀವನಕ್ಕೆ ಸಹಕಾರಿಯಾದ ಬಗೆಯನ್ನು ನೆನಪಿಸಿಕೊಂಡರಲ್ಲದೇ ಸದಾ ಅವರ ಮಾರ್ಗದರ್ಶನ ನೀಡುತ್ತಿರಬೇಕೆಂದು ನುಡಿದು ಶುಭಕೋರಿದರು. ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯಾಧ್ಯಾಧ್ಯಾಪಕ ಎಮ್.ಕೆ.ನಾಯ್ಕ ಮಾತನಾಡಿ ತಾನು ಓರ್ವ ಶಿಕ್ಷಕನಾಗಿ ಗುರುತಿಸಿಕೊಳ್ಳಲು ಕಾರಣವಾಗಿದ್ದು ಸೇವೆಸಲ್ಲಿಸಲು ಅವಕಾಶ ಕಲ್ಪಿಸಿದ ಭಟ್ಕಳ ಎಜುಕೇಶನ್ ಟ್ರಸ್ಟ. ಈ ಸಂಸ್ಥೆಯ ಅಧ್ಯಕ್ಷರಾದಿಯಾಗಿ ಎಲ್ಲರಿಗೆ ಸದಾ ಚಿರಋಣಿ ಹಾಗೂ ವೃತ್ತಿಜೀವನದ ಯಶಸ್ಸಿಗೆ ಸಹಕರಿಸಿದ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಮಗಿಂತ ಮೊದಲು ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರ ಮಾರ್ಗದರ್ಶನ ಹಾಗೂ ಸಹೋದ್ಯೋಗಿ ಮಿತೃರು, ಕಚೇರಿ ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರಲ್ಲದೇ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದುಕೊಂಡು ಉತ್ತಮ ನಾಗರಿಕರಾಗಿ ಬದುಕಿನಲ್ಲಿ ಯಶಸ್ವಿಗಳಾಗುವಂತೆ ಕರೆನೀಡಿದರು. ಕಾರ್ಯಕ್ರವiದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಶರತ್ ಗುನಗಿ ಎಲ್ಲರನ್ನು ಸ್ವಾಗತಿಸಿದರೆ ಶಿಕ್ಷಕ ಪರಮಯ್ಯ ಗೊಂಡ ವಂದಿಸಿದರು.

RELATED ARTICLES  ಸಾಹಿತ್ಯ ಪರಿಷತ್ತಿನಿಂದ ಸರ್.ಎಂವಿಶ್ವೇಶ್ವರಯ್ಯ ಅವರ ಸಂಸ್ಮರಣೆ

ಶಿಕ್ಷಕ ಪಾಂಡುರಂಗ ಅಳ್ವೆಗದೆ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಎಮ್.ಕೆ.ನಾಯ್ಕ ಅವರಿಗೆ ಭಟ್ಕಳ ಎಜುಕೇಶನ್ ಟ್ರಸ್ಟನ ಮ್ಯಾನೇಜಿಂಗ ಟ್ರಸ್ಟೀ ಆರ್.ಜಿ.ಕೊಲ್ಲೆ, ಟ್ರಸ್ಟೀ ಮ್ಯಾನೇಜರ್ ರಾಜೇಶ ನಾಯಕ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಅಪಾರ ವಿದ್ಯಾರ್ಥಿಬಳಗದವರು ಶುಭಕೋರಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಎಮ್.ಕೆ.ನಾಯ್ಕ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ತಾಲೂಕಾ ರಾಜ್ಯೊತ್ಸವ ಪ್ರಶಸ್ತಿ. ಮುರ್ಡೇಶ್ವರದ ಲಯನ್ಸ ಕ್ಲಬ್ ವತಿಯಿಂದ ನೀಡಿದ ಹೈಸ್ಕೂಲ್ ವಿಭಾಗದ ಉತ್ತಮ ಗಣಿತನ ಶಿಕ್ಷಕ ಪುರಸ್ಕಾರ ಹಾಗೆಯೆ ಭಟ್ಕಳ ತಾಲೂಕಿನ ಶಿಕ್ಷಣ ಇಲಾಖೆ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಭಟ್ಕಳ ಅರ್ಬನ್ ಬ್ಯಾಂಕ್ ಪ್ರಾಯೋಜಿತ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಸ್ಮರಿಸಿಕೊಳ್ಳಬಹುದು.

RELATED ARTICLES  ಕರ್ನಾಟಕ ವಿದ್ಯುತ್ ನಿಗಮಕ್ಕೆ‌ ಸೇರಿದ ಬಸ್ ಪಲ್ಟಿ: ಎಂಟು ಜನ ಆಸ್ಪತ್ರೆಗೆ ದಾಖಲು!