ಕಾರವಾರ: – ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾ ಅಣುಸ್ಥಾವರ ಸಮೀಪದ ಬಾರೆ ಗ್ರಾಮದ ಹತ್ತಿರ ಅರಣ್ಯದಿಂದ ಸೆಟಲೈಟ್ ಕಾಲ್ ಮಾಡಿದವರನ್ನು ಪತ್ತೆ ಹಚ್ಚಲು ಹೋಗಿ ಯಾರ ಸಂಪರ್ಕಕ್ಕೂ ಸಿಗದೆ ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡು
ಮಳೆಯಲ್ಲಿಯೇ ಈಡಿ ರಾತ್ರಿಯನ್ನು ಕಳೆದ ತಂಡ ಸುರಕ್ಷಿತವಾಗಿ ನಾಡು ಸೇರಿದೆ.
ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರು
ಕಾರವಾರ ಡಿವೈಎಸ್ಪಿ ಶಂಕರ್ ಮಾರಿಹಾಳ್ , ಐಬಿ ಅಧಿಕಾರಿ ನಿಶ್ಚಲಕುಮಾರ್ ಹಾಗೂ ತಂಡದವರು ಸುರಕ್ಷಿತ ವಾಗಿದ್ದಾರೆಂದು ತಿಳಿಸಿದ್ದಾರೆ.
ರವಿವಾರ ಬೆಳಿಗ್ಗೆ ಡಿವೈಎಸ್ಪಿ ನೇತೃತ್ವದ ತಂಡ ಬಾರೇ ಹೆರೂರು ಗ್ರಾಮ ಸಮೀಪದ ಅರಣ್ಯದಲ್ಲಿ ತನಿಖೆ ಸಂಬಂಧ ಹುಡುಕಾಟ ನಡೆಸಿತ್ತು. ಆದರೆ ಅರಣ್ಯದಲ್ಲಿ ದಾರಿ ತಪ್ಪಿದ ಕಾರಣ ಅವರು ರಾತ್ರಿಯಾದರೂ ಮರಳಿರಲಿಲ್ಲ.
ಈ ಸಂದರ್ಭದಲ್ಲಿ ಅಡಿಶನಲ್ ಎಸ್ಪಿ ಗೋಪಾಲ ಬ್ಯಾಕೋಡ ನೇತೃತ್ವದ ತಂಡ ಡಿವೈಎಸ್ಪಿ ಗಾಗಿ ಹುಡುಕಾಟ ಪ್ರಾರಂಭಿಸಿತ್ತು ಸೋಮವಾರ ಬೆಳಗಿನ ಜಾವ ಡಿವೈಎಸ್ಪಿ ಹಾಗೂ ತಂಡ ಕಾಡಿನಲ್ಲಿ ಭೇಟಿಯಾಯಿತು. ಆಗ ಪೋಲೀಸ್ ಇಲಾಖೆ
ಸಮಾಧಾನದ ನಿಟ್ಟುಸಿರು ಬಿಟ್ಟಿತ್ತು.
ಸೆಟಲೈಟ್ ಕಾಲ್ ಆದ ಸ್ಥಳ ಕೈಗಾ ಅಣುಸ್ಥಾವರ ಹಾಗೂ ನೌಕಾನೆಲೆ ಐಎನ್ ಎಸ್ ಕದಂಬದ ಶಸ್ತ್ರಾಗಾರ ಸಂಗ್ರಹ ವಜ್ರಕೋಶ ಕ್ಕೆ ಸಮಾನ ಅಂತರದಲ್ಲಿದೆ. ಹಾಗಾಗಿ ಪೊಲೀಸರು ಸೆಟಲೈಟ್ ಕಾಲ್ ಮಾಡಿದ ತಾಣ ಹುಡುಕಲು ಎರಡು ತಂಡವಾಗಿ ಕಾರ್ಯಾಚರಣೆಗೆ ಇಳಿದರು. ಒಂದು ತಂಡ ಬಾರೆ ಗ್ರಾಮದ ಅರಣ್ಯದಲ್ಲಿ. ಮತ್ತೊಂದು ಅಗಸೂರು ಕಡೆ ಭಾಗದಿಂದ ಅರಣ್ಯ ಪ್ರವೇಶಿಸಿತ್ತು.