ಕುಮಟಾ: ಅಥರ್ವಣ ವೇದದ ಉಪವೇದವಾದ ಆಯುರ್ವೇದ, ಬ್ರಹ್ಮನಿಂದ ಬಂದಿವೆ ಎಂದು ಹೇಳಲಾಗಿದ್ದು ಅದು ಅಪ್ಪಟ ಭಾರತೀಯ ವೈದ್ಯಶಾಸ್ತ್ರವಾಗಿದೆ ಹಾಗೂ ಸರ್ವಕಾಲಕ್ಕೂ ಸರ್ವಶ್ರೇಷ್ಠವಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಸಾಕಷ್ಟು ಸಂಶೋಧನೆಗಳಿಂದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುತ್ತಿದ್ದು, ತ್ವರಿತ ಆರಾಮ ಹಾಗೂ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಜನಪ್ರಿಯ ಆಯುರ್ವೇದ ತಜ್ಞ ಡಾ.ಎಂ.ಎಸ್.ಅವಧಾನಿ ನುಡಿದರು. ಅವರು ಇಲ್ಲಿಯ ಮಲ್ಲಾಪುರದಲ್ಲಿ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ದಿವ್ಯಾಶೀರ್ವಾದೊಡನೆ ರೋಟರಿ ಕ್ಲಬ್ ಕುಮಟಾ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆಯುರ್ವೇದ ತಪಾಸಣೆ ಮತ್ತು ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಚಿಕಿತ್ಸಕರಾಗಿ ಮಾತನಾಡುತ್ತಿದ್ದರು.
ರೋಟರಿ ಅಸಿಸ್ಟಂಟ್ ಗವರ್ನರ್ ಜಿ.ಎಸ್.ಹೆಗಡೆ ಅಧ್ಯಕ್ಷತೆ ವಹಿಸಿ ಆಯುರ್ವೇದ ವೈದ್ಯ ಪದ್ಧತಿಯು ಪ್ರಸ್ತುತ ಸನ್ನಿವೇಶಗಳಲ್ಲಿ ಪ್ರಾಮುಖ್ಯತೆ ಪಡೆದಿದ್ದು, ಯಾವುದೇ ಅಡ್ಡ ಪರಿಣಾಮವಿಲ್ಲದೇ ಡೆಂಗ್ಯೂ, ಕ್ಯಾನ್ಸರ್ ನಂತಹ ಕಾಯಿಲೆಗಳನ್ನೂ ವಾಸಿಪಡಿಸಬಹುದಾಗಿದೆ ಎಂದರು. ಈ ಕ್ಯಾಂಪಿನಲ್ಲಿ ಪ್ರಮುಖವಾಗಿ ಸಂದು ನೋವು, ನರಗಳ ನೋವು, ನರದೌರ್ಬಲ್ಯ, ಸುಸ್ತು, ಅಶಕ್ತತೆ ವ್ಯಾಧಿಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗಿತ್ತು.
ಹೊನ್ನಾವರ ಕಾಸರಕೋಡಿನ ಡಾ.ರಾಘವೇಂದ್ರ ಭಟ್ಟ, ಗೇರಸೊಪ್ಪಾದ ಡಾ.ಪ್ರೀತಿ ಕುಲಕರ್ಣಿ, ಡಾ. ಸಹನಾ ಅವಧಾನಿ ಈ ಸಂದರ್ಭದಲ್ಲಿ ಶಿಬಿರಾರ್ಥಿಗಳ ರೋಗ ನಿದಾನ ಹಾಗೂ ಚಿಕಿತ್ಸೆ ನೀಡಿ ಸಹಕರಿಸಿದರು. ರೋಟರಿ ಕಾರ್ಯದರ್ಶಿ ಕಿರಣ ನಾಯಕ, ಸದಸ್ಯರಾದ ಅರುಣ ಉಭಯಕರ, ಆರ್.ಟಿ.ಹೆಗಡೆ, ಎನ್.ಆರ್.ಗಜು, ನವೀನ ಕುಮಾರ, ಏನ್ ಛಾಯಾ ಉಭಯಕರ, ವಿಜಯಲಕ್ಷ್ಮೀ ನಾಯ್ಕ ಉಪಸ್ಥಿತರಿದ್ದು ಸಹಕರಿಸಿದರು. ರೋಟರಿ ವತಿಯಿಂದ ಗುರುಗಳ ಪಾದ್ಯಪೂಜೆ ನೆರವೇರಿಸಿದರು. ಮಂಜುನಾಥ ಮಡಿವಾಳ, ವಿ.ಟಿ.ಹೆಗಡೆ, ಕರುಣಾಕರ ನಾಯ್ಕ, ದೀಪಕ ಭಂಡಾರಿ, ನವೀನ ನಾಯ್ಕ, ಮಂಜುನಾಥ ಮೊದಲಾದವರು ಔಷಧಿ ಹಂಚಿಕೆಯಲ್ಲಿ ಪಾಲ್ಗೊಂಡ ಪ್ರಮುಖರು. ಮಿಲೇನಿಯಂ ಫಾರ್ಮಾ ಶಿರಸಿ, ಸ್ನೇಹಾ ನ್ಯಾಟುರಾ, ಶಾಂತಗೇರಿ ಫಾರ್ಮಾ, ಕ್ಯಾಪ್ರೋ ಲ್ಯಾಬ್, ಫಾರ್ಮಾ ಪುಡ್ ಪ್ರೈ. ಲಿಮಿಟೆಡ್, ದುರ್ಗಾ ಏಜೆನ್ಸಿ, ಎಸ್.ಜಿ.ಫೈಟೋ ಫಾರ್ಮಾ, ನಾಗಾರ್ಜುನ ಆಯುರ್ವೇದ, ಸಪ್ತಗಿರಿ ಆಯುರ್ವೇದ ಉಡುಪಿ, ಆರ್ಯ ಔಷಧಿ ಫಾರ್ಮಾ, ವಾದಿರಾಜ ಫಾರ್ಮಾ ಶಿರಸಿ, ರೆವಿಂಟೋ ಆಯುರ್ವೇದ, ವಾಸು ಹೆಲ್ತ್ ಕೇರ್ ಔಷಧಿ ಪೂರೈಕೆ ಮಾಡಿದ ಪ್ರಸಿದ್ಧ ಕಂಪನಿಗಳು. ಡಾ.ಬಿ.ಎಂ.ಪೈ ಚ್ಯಾರಿಟೇಬಲ್ ಟ್ರಸ್ಟ್ ಹಾಗೂ ಆಭರಣಾ ಜ್ಯೂವೆಲರ್ಸ್ ಕುಮಟಾ ಆರ್ಥಿಕ ನೆರವು ನೀಡಿದರು. 240 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಲಕ್ಷಕ್ಕೂ ಹೆಚ್ಚು ರು. ಮೌಲ್ಯದ ಔಷಧಿಯನ್ನು ಪಡೆದರು.