ಕುಮಟಾ: ಕುಮಟಾಕ್ಕೆ ಆಗಮಿಸಿದ ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ಸುದ್ದಿಗೋಷ್ಠಿಯ ಮೂಲಕ ನೆರೆ ಪರಿಹಾರದ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.ಜಿಲ್ಲೆಯಲ್ಲಿ ಸಂಭವಿಸಿದ ನೆರೆಯಿಂದ ಸಂತ್ರಸ್ತರಾದ ಅತಿಕ್ರಮಣದಾರರಿಗೂ ಯೋಗ್ಯ ಪರಿಹಾರ ಹಾಗೂ ಮೀನುಗಾರ ಕುಟುಂಬಕ್ಕೆ ತಲಾ 10 ಸಾವಿರ ಪರಿಹಾರ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದಾರೆಂದು ಕೆನರಾ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಜಿಲ್ಲೆಗೆ ಆಗಮಿಸಬೇಕಿದ್ದ ಸಿಎಂ ಪ್ರವಾಸ ಎರಡು ಬಾರಿ ಕೆಲ ಕಾರಣಗಳಿಂದ ರದ್ದಾಗಿದೆ. ಹಾಗಾಗಿ ಜಿಲ್ಲೆಯ ಶಾಸಕರ ನಿಯೋಗದೊಂದಿಗೆ ನೆರೆ ಪರಿಹಾರದ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಲು ನಾವು ಹೋದಾಗ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಜಿಲ್ಲೆಯಲ್ಲಿ ಸಂಭವಿಸಿದ ನೆರೆಯಿಂದ ಸಾವಿರಾರು ಮನೆಗಳು ಹಾನಿಗೊಳಗಾಗಿವೆ. ಸಮಗ್ರ ದಾಖಲೆಗಳಿದ್ದ ಮನೆಗಳಿಗೆ ಯೋಗ್ಯ ಪರಿಹಾರ ಸಂತ್ರಸ್ತರ ಕೈಸೇರಿದೆ. ಆದರೆ ಸಮರ್ಪಕ ದಾಖಲೆಗಳಿಲ್ಲದ ಅತಿಕ್ರಮಣದಾರರಿಗೂ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಸಿಎಂ ಬಳಿ ಒತ್ತಾಯಿಸಿದಾಗ, ಅದಕ್ಕೆ ಒಪ್ಪಿಕೊಂಡ ಸಿಎಂ ಅವರು ಯಾವುದೇ ಒಂದು ದಾಖಲೆಯನ್ನಾದರೂ ಪರಿಗಣಿಸಿ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಪಿಎಸ್ ಪ್ರಕ್ರಿಯೆ ಮುಗಿದ ಅತಿಕ್ರಮಣದಾರರಿಗೆ ಪರಿಹಾರ ವಿತರಿಸಲು ಯಾವುದೇ ತೊಂದರೆ ಇಲ್ಲ ಎಂಬುದನ್ನು ನಾನು ಈಗಾಗಲೇ ಅಧಿಕಾರಿಗಳಿಗೆ ಮನವರಿಕೆ ಮಾಡಿಸಿದ್ದೇನೆ.
ನೀರು ನುಗ್ಗಿದ ಮನೆಗಳಿಗೆ ತಲಾ 10 ಸಾವಿರ, ಹಾನಿಗೊಳಗಾದ ಮನೆಗೆ 1 ಲಕ್ಷ ಮತ್ತು ಸಂಪೂರ್ಣ ಹಾನಿಗೊಳಗಾದ ಮನೆಗೆ 5 ಲಕ್ಷ ಪರಿಹಾರ ಅತಿಕ್ರಮಣದಾರರಿಗೂ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಸಂಸದರು ಸ್ಪಷ್ಟಪಡಿಸಿದರು.
ಇನ್ನು ಮತ್ಸ್ಯ ಕ್ಷಾಮದಿಂದ ಕಂಗೆಟ್ಟ ಮೀನುಗಾರರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರತಿ ದೋಣಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದು ಕೇವಲ ಉತ್ತರಕನ್ನಡ ಜಿಲ್ಲೆಗೆ ಮಾತ್ರವಲ್ಲದೆ ಉಡುಪಿ, ಮಂಗಳೂರು ಜಿಲ್ಲೆಯ ದೊಡ್ಡ ಬೋಟ್‍ನಿಂದ ಹಿಡಿದು ಚಿಕ್ಕ ಪಾತಿ ದೋಣಿ ಹೊಂದಿರುವ ಮೀನುಗಾರರ ಕುಟುಂಬಕ್ಕೂ ಈ ನೆರವು ದೊರೆಯಲಿದೆ. ಇನ್ನು ಕುಮಟಾದಲ್ಲಿ ಮಾದರಿ ಗ್ರಾಮ ನಿರ್ಮಾಣ ಮಾಡಲು ಕಾಗಲ್ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನೀರು ಬರುವ ಪ್ರದೇಶದಲ್ಲಿ ನೆರೆ ಹಾವಳಿ ಬಂದಾಗ ಮನೆ ಬೀಡುವ ಸ್ಥಿತಿ ಉದ್ಭವಿಸಬಾರದೆಂದ ಕಾರಣಕ್ಕೆ 6 ಅಡಿ ಎತ್ತರದಲ್ಲಿ 1+1 ರಂತೆ 50 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕುಮಟಾದ ಹಾಲಕ್ಕಿ ಸಮುದಾಯದ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಗೆ ಕೆಲವೆಡೆ ತೊಂದರೆಗಳಾಗಿ ನಿಂತು ಹೋಗಿದೆ. ಇದಕ್ಕೆ ಹಣದ ಕೊರತೆ ಇಲ್ಲ. ಆದರೆ ಆಯಾ ಸ್ಥಳೀಯ ಮಟ್ಟದಲ್ಲಿ ಕೆಲ ರಾಜಕೀಯ ಕಾರಣದಿಂದ ಕಾಮಗಾರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಳೆಗಾಲ ಮುಗಿದ ಬಳಿಕ ಕಾಮಗಾರಿ ತೀವ್ರಗತಿ ಪಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ರಾಜ್ಯ ಸರ್ಕಾರದಿಂದ ಆಗಬೇಕಾದ ಕಾರ್ಯಗಳಿಗೆ ಶೀಘ್ರ ಚಾಲನೆ ದೊರೆಯಲಿದೆ. ಇ-ಸ್ವತ್ತು ಸಮಸ್ಯೆಯನ್ನು ಡಿಸಿಯೇ ಪರಿಹರಿಸಬೇಕಾದರೆ ತೊಂದರೆಯಾಗುತ್ತದೆ. ಹಾಗಾಗಿ ಆಯಾ ತಾಲೂಕಿನ ತಹಸೀಲ್ದಾರ್ ಅವರಿಗೆ ಅಧಿಕಾರ ದೊರೆತರೆ, ಸಮಸ್ಯೆ ಪರಿಹರಿಸಲು ಸರಳವಾಗುತ್ತದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಮುನೀಶ್ ಮುದ್ಗಿಲ್ ಅವರ ಬಳಿ ಚರ್ಚಿಸಿದ್ದೇವೆ. ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ. ಈ ಸಂಬಂಧ ಜಿಲ್ಲೆಯ ಎಲ್ಲ ಶಾಸಕರು ಕಂದಾಯ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರೂ. ಅನುದಾನ ನೀಡಿದೆ. ಅದರ ಆದೇಶ ಪ್ರತಿ ಆಯಾ ಶಾಸಕರ ಕೈ ಸೇರಿದೆ. ಪಟ್ಟಣದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ದುಸ್ತರವಾಗಿದೆ. ಆ ಎಲ್ಲ ರಸ್ತೆಗಳ ಸುಧಾರಣೆ ಮಾಡಲು ಯೋಜನೆ ರೂಪಿಸಲಾಗಿದೆ. ಆದರೆ ಮಳೆ ಅಡ್ಡಿಯಾಗಿದ್ದರಿಂದ ಮಳೆಗಾಲ ಮುಗಿದ ತಕ್ಷಣ ರಸ್ತೆ ಅಭಿವೃದ್ಧಿ ಕಾರ್ಯ ಶುರುವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕುಮಟಾ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ಬಿಜೆಪಿ ಪ್ರಮುಖರಾದ ವಿನೋದ ಪ್ರಭು, ವೆಂಕಟೇಶ ನಾಯಕ, ನಾಗರಾಜ ನಾಯಕ ತೋರ್ಕೆ, ಗಜಾನನ ಗುನಗಾ, ಪ್ರಶಾಂತ ನಾಯ್ಕ, ಕಿಶನ ವಾಳ್ಕೆ, ವಿಶ್ವನಾಥ ನಾಯ್ಕ, ಹೇಮಂತಕುಮಾರ ಗಾಂವ್ಕರ್, ಡಾ.ಜಿ.ಜಿ.ಹೆಗಡೆ ಇತರರು ಇದ್ದರು