ಕುಮಟಾ: ಗುತ್ತಿಗೆದಾರ ಹಾಗೂ ಪಿ ಡಬ್ಯೂ ಡಿ ಅಧಿಕಾರಿ ಎಸಿ ರೂಮ್ ಅಲ್ಲಿ ಮಲಗಿದ್ರೆ ಇವರಿಂದ ಕೆಲಸ ಮಾಡಿಸಿಕೊಂಡ ಊರಿನವರು ರೋಡಿನಲ್ಲಿ ಬಿದ್ದು ಗಾಯಮಾಡಿಕೊಂಡು ಆಸ್ಪತ್ರೆಯಲ್ಲಿ ಮಲಗುತ್ತಿದ್ದಾರೆ. ಈ ಕಾರಣದಿಂದಾಗಿ ಊರಿನವರೆ ಒಂದಾಗಿ ರಸ್ತೆಗಿಳಿದು ರಿಪೇರಿ ಮಾಡಿಕೊಂಡಿದ್ದಾರೆ. ಹೌದು ಇಂತದೊಂದು ಘಟನೆ ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಬರಗದ್ದೆ ಊರಿನಲ್ಲಿ ನಡೆದಿದೆ.
ಕಳೆದ 2015-16 ನೇ ಸಾಲಿನಲ್ಲಿ ಪಿ.ಡಬ್ಯೂ.ಡಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಕುಮಟಾ ಶಿರಸಿ ಸಂಪರ್ಕ ನೀಡುವ ರಾಜ್ಯ ಹೆದ್ದಾರಿ 69 ರ ನಡುವೆ ಬರಗದ್ದೆ ಊರಿನಲ್ಲಿ ಹಾದು ಹೋಗುವ ಜಿಲ್ಲಾ ಮುಖ್ಯ ರಸ್ತೆ ನ್ನು ಅಗಲೀಕರಣ ಮಾಡಿ ನೂತನ ರಸ್ತೆ ನಿರ್ಮಿಸುವ ಟೆಂಡರ್ ಕರೆದಿತ್ತು.
3 ಜನ ಶ್ರೇಷ್ಠ ಗುತ್ತಿಗೆದಾರರಿಗೆ ಟೆಂಡರ್ ನೀಡಿದ ಪಿಡಬ್ಯೂಡಿ ಇಲಾಖೆಯವರು ಕೆಲಸ ಆಮೆಗತಿಯಲ್ಲಿ ನಡೆಯುತ್ತಿದ್ದರೂ ನೋಡಿ ಸುಮ್ಮನಿದ್ದರು. ಮಳೆಗಾಲ ಪ್ರಾರಂಭವಾದರೂ ಗುತ್ತಿಗೆದಾರ ಡಾಂಬರೀಕರಣ ಮಾಡದೇ 2 ದಿನ ಮಳೆ ಬಂದ ನಂತರ ರಾತ್ರಿ ಬೆಳಗಾಗೋ ತನಕ 1.50ಕಿ.ಮೀ. ಡಾಂಬರೀಕರಣ ಮುಗಿಸಿರುತ್ತಾರೆ. ರಸ್ತೆ ನಿರ್ಮಾಣವಾದ 4 ದಿನಕ್ಕೆ ರಸ್ತೆ ಮಧ್ಯ ಹೊಂಡಬಿದ್ದು ಮರು ಡಾಂಬರೀಕರಣ ಮಾಡಿರುತ್ತಾರೆ. ಮಳೆಗಾಲ ಮುಗಿಯುವ ವೇಳೆಗೆ ಹಳೆ ರಸ್ತೆ ಕಾಣುವ ರೀತಿಯಲ್ಲಿ ಉತ್ತಮ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ಬಗ್ಗೆ ಗುತ್ತಿಗೆದಾರರಲ್ಲಿ ಹೇಳಿದಾಗ *“ಹೆಗಡೆ ಜಿ ಹಾವ್ ಅಸಾ..ಕಸಲೆ ಜಲೇರ್ ಬಿನ್ ಹಾವ್ ಪೊಲೊನ್ ಗೆತಾ..”* ಎಂದು ಸಮಾದಾನದ ಮಾತು ಹೇಳಿ ಕಳಿಸಿದ್ದರು. ಮುಂದಿನ ವರ್ಷ ಅಲ್ಲಿಂದ 1.50 ಕಿ.ಮಿ. ರಸ್ತೆ ಅಗಲೀಕರಣ ಮಾಡಿ ಡಾಂಬರೀಕರಣ ಮಾಡಲಾಯಿತು. ಮುಂದಿನ ಇನ್ನುಳಿದ 1.50ಕಿ.ಮಿ. ರಸ್ತೆಯನ್ನು ಇಂದಿನವರೆಗೂ ಯಾವ ಗುತ್ತಿಗೆದಾರನೂ ಕೂಡ ಕೆಲಸ ಪ್ರಾರಂಭಮಾಡಿಲ್ಲ. ಸಂಪೂರ್ಣ ಹೊಂಡಗಳಿಂದ ತುಂಬಿ ತುಳುಕಾಡುತ್ತದೆ. ಪ್ರತಿ ದಿನವೂ ಕೂಡ ನೂರಾರು ಖಾಸಗಿ ವಾಹನಗಳು, ಸರ್ಕಾರಿ ಬಸ್ ಗಳು ದ್ವಿಚಕ್ರವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸುತ್ತದೆ.
ಆದರೂ ಕೂಡ ಯಾವ ಪಿಡಬ್ಯೂಡಿ ಅಧಿಕಾರಿಗಳೂ ಕೂಡ ಇತ್ತ ನೋಡಿಲ್ಲ. ಮಾನ್ಯ ಸಂಸದರಿಂದ ಗ್ರಾಮ ಪಂಚಾಯತ ಅದ್ಯಕ್ಷರವರೆಗಿನ ಎಲ್ಲಾ ಅಧಿಕಾರಿಗಳ ಗೂಟದ ಕಾರುಗಳು ಈ ರಸ್ತೆಯಲ್ಲೇ ಸಂಚರಿಸುತ್ತದೆ. ಆದರೂ ಕೂಡ ಯಾರೂ ಈ ವರೆಗೆ ತಲೆಕೆಡಸಿಕೊಂಡಿಲ್ಲ. ಕಳೆದ 3 ವರ್ಷಗಳಿಂದ ಕಳಪೆ ಡಾಂಬರೀಕರಣದಿಂದಾಗಿ ರಸ್ತೆಯಲ್ಲಿ ಬೇಬಿ ಜಲ್ಲಿಕಲ್ಲುಗಳು ಹೇರಳವಾಗಿ ತುಂಬಿ ದ್ವಿಚಕ್ರ ವಾಹನದವರು ರಸ್ತೆಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡವರ ಸಂಖ್ಯೆ ಲೆಕ್ಕದಲ್ಲಿ ಇಲ್ಲ. ಕಳೆದ ವರ್ಷ ಅಧಿಕ ಸಂಖ್ಯೆಯಲ್ಲಿ ಟ್ಯಾಂಕರ್ ವಾಹನಗಳು ಈ ರಸ್ತೆಯ ಮೂಲಕ ಹಾದುಹೋಗಿ ರಸ್ತೆ ಸಂಪೂರ್ಣ ಹಾಳಾಗಿದ್ದು ಈಗ ಮತ್ತಷ್ಟು ಆತಂಕಕಾರಿಯಾಗಿದೆ. ಈ ವರ್ಷ ಮಳೆಗಾಲ ಬೀಕರವಾಗಿ ಬಂದ ಕಾರಣ ರಸ್ತೆಯಲ್ಲಿ ಜಲ್ಲಿಕಲ್ಲು ಹಾಸು ಬಿದ್ದಿದೆ. ಪ್ರತಿ ದಿನ ಸಾಮಾನ್ಯವಾಗಿ ಊರಿನವರೂ ಸೇರಿ ಒಬ್ಬರಾದರೂ ಇಲ್ಲಿ ಆಯ ತಪ್ಪಿ ಬಿದ್ದು ಗಾಯ ಮಾಡಿಕೊಳ್ಳುತ್ತಲೇ ಇದ್ದಾರೆ. ದ್ವಿಚಕ್ರ ವಾಹನದವರಷ್ಟೇ ಅಲ್ಲದೆ ರಿಕ್ಷಾ, ಕಾರಿನಂತಹ ವಾಹನಗಳೂ ಕೂಡ ಆಯ ತಪ್ಪಿ ರಸ್ತೆ ಪಕ್ಕದ ಚರಂಡಿ ಹಾದಿ ಹಿಡಿದು ಪಲ್ಟಿ ಆಗಿದ್ದು ಇದೆ. ಇಷ್ಟಾದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಕೋಪಗೊಂಡ ಊರಿನ ಕೆಲವರು ಭಾನುವಾರ ಸ್ವತಃ ತಾವೇ ಒಟ್ಟಾಗಿ ರಸ್ತೆಯಲ್ಲಿ ತುಂಬಿದ್ದ ಬೇಬಿ ಜಲ್ಲಿಕಲ್ಲುಗಳನ್ನು ಗುಡಿಸಿ ರಾಶಿ ಮಾಡಿ ಗಾಡಿಯಲ್ಲಿ ಒಯ್ದು ಮುಂದೆ ರಸ್ತೆಯಲ್ಲಿ ಆದ ಹೊಂಡಗಳಿಗೆ ತುಂಬಿದ್ದಾರೆ. ಇನ್ನಾದರೂ ಕಳಪೆ ಗುಣಮಟ್ಟದ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಟೆಂಡರ್ ನೀಡಿ ಅವರ ಹೊಟ್ಟೆ, ಜೇಬು ತುಂಬುವ ಕೆಲಸ ಮಾಡಿ ಜನರಿಂದ ಶಾಪ ಹಾಕಿಸಿಕೊಳ್ಳುವುದನ್ನು ಬಿಟ್ಟು ಉತ್ತಮ ಕಾಮಗಾರಿ ಮಾಡವ ಗುತ್ತಿಗೆದಾರರಿಗೆ ನೀಡಿ ಜನರಿಂದ ಶಹಬ್ಬಾಸ್ ಹೇಳಿಸಿಕೊಳ್ಳಲಿ ಎಂದು ಊರಿನವರ ಆಶಯವಾಗಿದೆ.