ಕುಮಟಾ: ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಶಾಖೆ ಹಾಗೂ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕಸ್ತೂರಬಾ ಇಕೋಕ್ಲಬ್ ಸಹಯೋಗದಲ್ಲಿ ಇಲ್ಲಿನ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಮಾತನಾಡಿ, ಜಂತು ಹುಳು ಭಾದಿತ ಮಕ್ಕಳು ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಸುಸ್ತು ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದು ಅವರಿಗೆ ಸರಕಾರ ಪೂರೈಕೆ ಮಾಡಿದ ಅಲ್ಬೆಂಡಾಜೋಲ್ ಜಂತು ಹುಳು ನಿವಾರಕ ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದರು.

ಇದು ಸುರಕ್ಷಿತವಾಗಿದ್ದು ಯಾವುದೇ ಅಡ್ಡ ಪರಿಣಾಮ ರಹಿತವಾಗಿದೆ. ಮಾತ್ರೆಯನ್ನು ಚೀಪಿ ತಿನ್ನಬೇಕು. ಜಂತು ಹುಳು, ಕೊಕ್ಕೆ ಹುಳುವಿಂದಾಗಿ ವಿಟಾಮಿನ್ ಕೊರತೆಯುಂಟಾಗಿ ದೈಹಿಕ ಬೆಳವಣಿಗೆ ಕುಗ್ಗುತ್ತಿದ್ದು, ಶಾಲಾ ಹಾಜರಾತಿ ಕಡಿಮೆಯಾಗಲು ಕಾರಣವಾಗುತ್ತದೆ ಎಂದು ಅಭಿಪ್ರಾಯಿಸಿದರು. ತಾಲೂಕಾ ಅಕ್ಷರ ದಾಸೋಹದ ನಿರ್ದೇಶಕ ದೇವರಾಯ ನಾಯಕ ಸರಕಾರ ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ಕೊಡಮಾಡಿದ ಮಾತ್ರೆಗಳು ಕ್ರಮಬದ್ಧವಾಗಿ ತೆಗೆದು ಕೊಂಡಾಗ ಮಕ್ಕಳ ಬೌದ್ಧಿಕ ಬೆಳವಣಿಗೆ ಹೆಚ್ಚಿಸಲು ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಿ ಆರೋಗ್ಯ ಭಾರತ ನಿರ್ಮಾಣಗೊಳ್ಳಲು ಸಾಧ್ಯವೆಂದು ತಿಳಿಸಿದರು, ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಮಾನವನ ಕರುಳಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಜೀವಿಸುವ ಪರಾವಲಂಬಿಗಳಾದ ಜಂತು, ಕೊಕ್ಕೆ ಹುಳುಗಳ ಸೋಂಕಿಗೆ ಬಲಿಯಾಗದಂತೆ ಬರಿಗಾಲಲ್ಲಿ, ಬಯಲು ತೋಟಗಳಲ್ಲಿ ನಡೆದಾಡದೇ, ಆಹಾರ ಸೇವಿಸುವ ಮತ್ತು ತಯಾರಿಸುವ ಮುನ್ನ ಹಾಗೂ ನಂತರ, ಶೌಚದ ನಂತರ ಕಡ್ಡಾಯವಾಗಿ ಕೈ ತೊಳೆಯಬೇಕೆಂದು ಸಲಹೆ ನೀಡಿದರು. ಆಶಾ ಕಾರ್ಯಕರ್ತೆ ಅಂಕಿತಾ ನಾಯ್ಕ ಕೈ ತೊಳೆಯುವ ಪ್ರಾತ್ಯಕ್ಷಿಗೆ ನೀಡಿ ಗಮನಸೆಳೆದರು.

RELATED ARTICLES  ಐತಿಹಾಸಿಕ ಮಿರ್ಜಾನ್ ಕೋಟೆಗೆ ತೆರಳುವ ರಸ್ತೆ ಸರಿಪಡಿಸಲು ಮನವಿ: ಶಾಸಕರಿಂದ ಸಿಕ್ಕಿದೆ ಭರವಸೆ.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕ ದಿನೇಶ ನಾಯ್ಕ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜೆ.ನಾಯ್ಕ, ಹಿರಿಯ ಆರೋಗ್ಯ ಸಹಾಯಕಿ ವಿ.ಎಸ್.ಗೋವೇಕರ, ಆಶಾ ಕಾರ್ಯಕರ್ತೆಯರಾದ ಶೋಭಾ ಗುನಗಾ, ಅನಿತಾ ನಾಯ್ಕ, ನಾಗರತ್ನಾ ಭಂಡಾರಿ ಉಪಸ್ಥಿತರಿದ್ದು, ಮಕ್ಕಳಿಗೆ ಹುರಿದುಂಬಿಸುತ್ತಾ ಮಾತ್ರೆ ತಿನ್ನಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಕಸ್ತೂರಬಾ ಇಕೋ ಕ್ಲಬ್ ಸಂಚಾಲಕ ನಿರ್ವಹಿಸಿದರು. ಸರಿ ಊಟದ ತರುವಾಯ ಸುಮಾರು 310 ಮಾತ್ರೆಗಳನ್ನು ವಿತರಿಸಲಾಯಿತು.

RELATED ARTICLES  ಡಿಜಿಟಲ್ ಮಾಧ್ಯಮದ ಮೂಲಕ ನಿರಂತರ ಶೈಕ್ಷಣಿಕ ಪ್ರಕ್ರಿಯೆ ನಡೆಸುತ್ತಿರುವ ಕೊಂಕಣ ಎಜ್ಯುಕೇಶನ್