ಕುಮಟಾ: ಅಕ್ಟೋಬರ್ 04, 1957 ರಂದು ಉಡಾಯಿಸಲ್ಪಟ್ಟ “ಸ್ಪುಟ್ನಿಕ್”ನ ಸ್ಮರಣಾರ್ಥ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿರುವ ವಿಶ್ವದ ಎಲ್ಲಾ ರಾಷ್ಟ್ರಗಳು ಅಕ್ಟೋಬರ್ 4 ರಿಂದ 10ರವರೆಗೆ ‘ವಿಶ್ವ ಬಾಹ್ಯಾಕಾಶ ಸಪ್ತಾಹ’ವನ್ನು ಆಚರಿಸುತ್ತಿವೆÉ. ಇದರ ಅಂಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇವರು ಕರ್ನಾಟಕದ ಕೆಲವೇ ಕೆಲವು ಆಯ್ದ ಪ್ರೌಢಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಸಪ್ತಾಹದ ದ್ಯೋತಕವಾಗಿ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದೆ.

RELATED ARTICLES  ಉತ್ತರಕನ್ನಡದ ಕೆಲ ತಾಲೂಕಿನ ಕೊರೋನಾ ಅಪ್ಡೇಟ್

ಶಾಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಈ ಅವಕಾಶ ಒದಗಲು ಪ್ರಮುಖ ಕಾರಣ ಎನ್ನಲಾಗಿದೆ. ಬೆಂಗಳೂರಿನ ಯು.ಆರ್.ರಾವ್ ಸೆಟಲೈಟ್ ಕೇಂದ್ರದ ಡೆಪ್ಯೂಟಿ ಡೈರೆಕ್ಟರ್
ಶ್ರೀ ಸುಬ್ರಹ್ಮಣ್ಯ ಉಡುಪ ಇವರ ನೇತ್ರತ್ವದಲ್ಲಿ ಹದಿನೈದು ವಿಜ್ಞಾನಿಗಳ ತಂಡ ಆಗಮಿಸಿ
ದಿನಾಂಕ 05-10-2019 ಶನಿವಾರ ಮುಂಜಾನೆ 9 ಗಂಟೆಯಿಂದ ಸಂಜೆ 4:30ರ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ವ್ಯೋಮ ವಿಜ್ಞಾನ, ಅಂತರಿಕ್ಷ ಯಾನ, ಬಾಹ್ಯಾಕಾಶ ಸಂಶೋಧನೆ, ಉಪಗ್ರಹ ಉಡಾವಣೆ ಇವುಗಳ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಿದ್ದಾರೆ. ಇದರ ಹೊರತಾಗಿ ಇಸ್ರೋ ವತಿಯಿಂದ ವಿಜ್ಞಾನ ಮಾದರಿ ಹಾಗೂ ಪೋಸ್ಟರ್ ಪ್ರದರ್ಶನದ ಜೊತೆಗೆ ವ್ಯೋಮ ವಿಜ್ಞಾನದ ಕುರಿತು ವಿಡಿಯೋ ಪ್ರದರ್ಶನ ಹಾಗೂ ಉಪನ್ಯಾಸಗಳು ಇರುತ್ತವೆ.

RELATED ARTICLES  ಸಂಗೀತದಲ್ಲಿ ಸಾಧನೆ ಮಾಡಿ ಚಿನ್ನದ ಪದಕ‌ ಪಡೆದ ಸಂಗೀತಾ

ಕುಮಟಾ ತಾಲೂಕಿನ ಎಲ್ಲಾ ಹಾಗೂ ಆಹ್ವಾನಿತ ಇತರೇ ತಾಲೂಕಿನ ಪ್ರೌಢಶಾಲೆಗಳಿಂದ ಅಂದಾಜು ಮೂರುನೂರು ವಿದ್ಯಾರ್ಥಿಗಳು ಆಗಮಿಸಿ ಇದರ ಪ್ರಯೋಜನ ಪಡೆಯಲಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಆಶುಭಾಷಣ, ಪೋಸ್ಟರ್ ಪ್ರದರ್ಶನದಂತಹ ವಿವಿಧ ಸ್ಪರ್ಧೆಗಳು ನೆರವೇರಲಿವೆಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.