ಕಾರವಾರ : ಪರಿಸರ ಸಂರಕ್ಷಣೆ ಮಾಡಿದಲ್ಲಿ ಮಾನವನ ಉನ್ನತಿಯಿದೆಯೇ ಹೊರತು ಪರಿಸರ ಘಾತಕ ಕಾರ್ಯಗಳಿಂದ ಅನಾಹುತಗಳೇ ಜಾಸ್ತಿ. ನಾವೆಲ್ಲರೂ ಒಗ್ಗಟ್ಟಿನಿಂದ ಕೈಗಾದ ನೂತನ ಘಟಕದ ವಿರುದ್ಧ ಹೋರಾಡಬೇಕು ಎಂದು ರಾಮಕ್ರಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಕರೆ ನೀಡಿದರು. ಅವರು ಇಲ್ಲಿಯ ದೈವಜ್ಞ ಸಭಾಭವನದಲ್ಲಿ ನಡೆದ ಕೈಗಾ ೫ ಹಾಗೂ ೬ನೇ ಘಟಕದ ವಿರೋಧಿ ಸಮಿತಿಯ ಜಿಲ್ಲಾ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.


ಕೈಗಾ ಅಣುಸ್ಥಾವರದಿಂದ ಈಗಾಗಲೇ ಜಿಲ್ಲೆ ಜನ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದು ೫ ಹಾಗೂ ೬ನೇ ಘಟಕದಿಂದ ಮತ್ತಷ್ಟು ಅಪಾಯಕಾರಿ ಸನ್ನಿವೇಶ ಎದುರಾಗಲಿದೆ. ಉತ್ತರಕನ್ನಡದ ಜನರಿಗೆ ಆರೋಗ್ಯಯುತ ಬಾಳ್ವೆಗೆ ಅವಕಾಶ ನೀಡಿ, ಇಲ್ಲವಾದಲ್ಲಿ ನಾವು ಜೀವ ಹೊಗುವವರೆಗೂ ಹೋರಾಡುತ್ತೇವೆ ಎಂದು ವಿಜ್ಞಾನಿ ವಿ.ಎನ್. ನಾಯ್ಕ ಹೇಳಿದರು.
ದೊಡ್ಡ ದೊಡ್ಡ ಯೋಜನೆಗಳು ನಡೆಯುವುದು ಕಾಡಿನ ಪ್ರದೇಶದಲ್ಲೇ ಆಗಿರುವುದರಿಂದ ವನವಾಸಿ ಸಮುದಾಯದವರು ತೀವ್ರ ಸಂಕಷ್ಠಕ್ಕೀಡಾಗುತ್ತಿದ್ದಾರೆ. ಯಾವುದೇ ಸರ್ಕಾರವು ಸ್ಥಾನೀಯ ಸಮುದಾಯಗಳ ಬಳಿ ಚರ್ಚೆ ಮಾಡದೇ ಯೋಜನೆಗಳನ್ನು ಜಾರಿ ಮಾಡಬಾರದು. ತಕ್ಷಣ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಶಿರಸಿ ವನವಾಸಿ ಕಲ್ಯಾಣ ಸಮಿತಿಯ ಶಾಂತಾರಾಮ ಶೆಟ್ಟಿ ಹೇಳಿದರು.

RELATED ARTICLES  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತ


ಅಂದಿನ ಕಾಲದಲ್ಲಿ ಕೈಗಾ ಅಣುಸ್ಥಾವರದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿರಲಿಲ್ಲ, ವಿರೋಧದ ನಡುವೆಯೂ ಸ್ಥಾಪಿಸಲಾಗಿತ್ತು. ಈಗ ೫ಹಾಗೂ ೬ನೇ ಘಟಕದ ನಿರ್ಮಾಣ ಆತಂಕಕಾರಿ ಬೆಳವಣಿಗೆಯಾಗಿದ್ದು ಕಾನೂನು ಪ್ರಕಾರವಾಗಿ ಹೋರಾಡುವ ನಿಟ್ಟಿನಲ್ಲಿ ನಾವೆಲ್ಲರೂ ಹೆಜ್ಜೆಯಿಡಬೇಕು. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಟಕ್ಕಿಳಿಯೋಣ ಎಂದು ಪರಿಸರ ಹೋರಾಟಗಾರ ಅನಂತ ಹೆಗಡೆ ಆಶೀಸರ ಕರೆ ನೀಡಿದರು.

ವೇದಿಕೆಗೆ ನಾ ಬರೊಲ್ಲ ಎಂದ ಅಸ್ನೋಟಿಕರ್!
ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವೇದಿಕೆಯಲ್ಲಿ ಕೂರಲು ಹಿಂದೇಟು ಹಾಕುವ ಮೂಲಕ ಕೆಲಕಾಲ ಎಲ್ಲರ ಗಮನವನ್ನ ತಮ್ಮತ್ತ ಸೆಳೆದರು. ಸಭೆಗೆ ಅತಿಥಿಯಾಗಿ ಆಮಂತ್ರಿಸಲಾಗಿತ್ತಾದರೂ ವೇದಿಕೆ ನಿರಾಕರಿಸಿ ವೇದಿಕೆ ಮುಂಬಾಗದಲ್ಲಿ ಕುಳಿತರು. ನಮ್ಮಲ್ಲೇ ಎರಡು ಮೂರು ಬಣಗಳನ್ನು ಮಾಡಿಕೊಂಡು ಹೋರಾಟ ಮಾಡುವುದು ಸಲ್ಲದು. ಕೈಗಾ ಅಣುಸ್ಥಾವರದ ಹೊಸ ಘಟಕದ ವಿರೋಧದ ಹೋರಾಟ ಕೆಲ ಜನಗಳಿಗಷ್ಟೇ ಸೀಮಿತವಾಗಬಾರದು ಹಾಗೂ ರಾಜಕೀಯ ಬಣ್ಣವನ್ನು ಮೆತ್ತಿಕೊಳ್ಳಬಾರದು. ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರುಗಳೂ ಬರಲಿ, ಆಗ ಎಲ್ಲರೂ ಕುಳಿತು ಹೋರಾಟದ ತೀರ್ಮಾನ ಕೈಗೊಳ್ಳೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  ದೀವಗಿಯಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜ್ಯೋತಿರ್ಲಿಂಗ ರಥಯಾತ್ರೆ : ವಿಶೇಷವಾಗಿ ನಡೆದ ಕಾರ್ಯಕ್ರಮ.

ಸಭೆಯಲ್ಲಿ ಮಾಜಿ ಶಾಸಕ ಗಂಗಾಧರ ಭಟ್ಟ, ಪರಿಸರವಾದಿ ಅನಂತ ಹೆಗಡೆ ಆಶೀಸರ, ನ್ಯಾಯವಾದಿ ಸಂಜಯ್, ಪ್ರೀತಮ್ ಮಾಸೂರಕರ್, ಜಿಪಂ ಸದಸ್ಯ ಜಿಎಂ ಶೆಟ್ಟಿ, ವನವಾಸಿ ಕಲ್ಯಾಣ ಸಮಿತಿಯ ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು.