ಭಟ್ಕಳ : ನಾಡ ಹಬ್ಬದಂದು ನಡೆಯುತ್ತಿರುವ ದಸರಾ ಕಾವ್ಯೊತ್ಸವ ಅತ್ಯಂತ ವಿಶಿಷ್ಟ ಎಂದು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ನರಸಿಂಹ ಮೂರ್ತಿ ನುಡಿದರು. ಅವರು ಇಲ್ಲಿನ ಶಿರಾಲಿಯ ನೀರಕಂಠದ ಮಠದ ಸಿದ್ಧಿವಿನಾಯಕ ದೇವಾಲಯದಲ್ಲಿ ಭಟ್ಕಳ ತಾಲೂಕಾ ಕಸಾಪ ಆಯೋಜಿಸಿದ ದಸರಾ ಕಾವ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಾಡಹಬ್ಬ ದಸರಾದ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಿರುವುದು ಅರ್ಥಪೂರ್ಣ. ಒಂದು ಊರಿನಲ್ಲಿ ಶಾಲೆ ಮತ್ತು ದೇವಾಲಯಗಳು ಹೇಗಿವೆ ಎಂಬುದನ್ನು ಗಮನಿಸಿದಾಗ ಊರಿನ ಪ್ರಗತಿಯ ಚಿತ್ರಣ ದೊರಕುತ್ತದೆ. ಈ ನೆಲೆಯಲ್ಲಿ ಶಾಲೆ ಮತ್ತು ದೇವಾಲಯಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿದ್ಧಿವಿನಾಯಕ ದೇವಾಲಯದ ಉತ್ಸವ ಸಂಘಟಿಸುತ್ತಿರುವ ಯುವಕರ ಕಾರ್ಯ ವೈಕರಿ ಮೆಚ್ಚುವಂಥದ್ದು. ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಸಂಘಟಿಸಿದ ಕಾರಣದಿಂದಾಗಿಯೇ ಸಾಹಿತ್ಯ ಸಾರಥ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪರಿಷತ್ತಿನ ಕಾರ್ಯ ಅಭಿನಂದನಾರ್ಹ ಎಂದು ನುಡಿದು ಕಸಾಪ ತಾಲೂಕಾಧ್ಯಕ್ಷ ಅಧ್ಯಕ್ಷ ಗಂಗಾಧರ ನಾಯ್ಕ ಹಾಗೂ ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಸಾಹಿತಿ ಎಂ.ಡಿ.ಪಕ್ಕಿ ಉದ್ಘಾಟಿಸಿ ಮಾತನಾಡಿ ದಸರಾ ಉತ್ಸವದ ಧಾರ್ಮಿಕ ಹಿನ್ನೆಲೆಯನ್ನು ತಿಳಿಸಿ ನಮ್ಮೊಳಗಿನ ಅಸುರೀ ಗುಣಗಳು ದೂರವಾಗಬೇಕು, ನಮ್ಮ ಅಂತರಂಗದ ಕಣ್ಣನ್ನು ತೆರೆದಾಗ ನಿಜವಾಗಿ ವಿಜಯ ದಶಮಿಯ ಆಚರಣೆಗೆ ಅರ್ಥಸಿಕ್ಕಂತಾಗುತ್ತದೆ ಎಂದು ನುಡಿದು ಇತ್ತಿಚೆಗೆ ಅತಿವೃಷ್ಠಿಯ ದುಷ್ಪರಿಣಾಮ ಬಿಂಬಿಸುವ ಸೂರು ಎಂಬ ಕವನ ವಾಚಿಸಿದರುಪ್ರಕೃತಿ ಮತ್ತು ನಮ್ಮ ಬದುಕಿನ ಅನುಸಂಧಾನವಾಗಬೇಕೆಂಬ ಆಶಯ ಬಿಂಬಿಸುವ ಮರಳಿ ಬರಲಿ ನವರಾತ್ರಿ ಎಂಬ ಕವಿತೆಯನ್ನು ಸಾಹಿತಿ ಶ್ರೀಧರ ಶೇಟ್ ವಾಚಿಸಿದರು.
ಶಿಕ್ಷಕ, ಕವಿ ಚಂದ್ರಶೇಖರ ಪಡುವಣಿ ಜೀವಜಲ ನೀರನ್ನು ರಕ್ಷಿಸಬೇಕೆಂಬ ಸಂದೇಶ ನೀಡುವ ಜೀವರಕ್ಷಕ ಕವಿತೆ ವಾಚಿಸಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳನ್ನು ಬೆಸೆಯುವ ಆಶಯವನ್ನು ಹೊಂದಿದ ಕವಿತೆ ವಾಚಿಸಿದರೆ ಕವಿ ಮಂಜುನಾಥ ಯಲ್ವಡಿಕವೂರ ಅಪ್ಪನ ಹರಿದ ಅರ್ಧ ತೋಳಿನ ಅಂಗಿ ಎಂಬ ಅರ್ಥಪೂರ್ಣ ಕವಿತೆಯನ್ನು ವಾಚಿಸಿದರು. ಯುವ ಕವಿ ಕೃಷ್ಣ ಮೊಗೇರ ಬಾಲ್ಯದ ಶಾಲಾ ದಿನಗಳನ್ನು ಅರ್ಥಪೂರ್ಣವಾಗಿ ನೆನಪಿಸುವ ಆ ದಿನಗಳು ಎಂಬ ಕವಿತೆಯನ್ನು, ಕವಯತ್ರಿ ಚಂದ್ರಪ್ರಭಾ ಕೊಡಿಯಾ ನೀಲಮೇಘಶ್ಯಾಮ ಕವಿತೆ ವಾಚಿಸಿದರು.
ಕಸಾಪ ತಾಲೂಕಾಧ್ಯಕ್ಷ ಗಂದಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿ ಗೀತೆಯೊಂದನ್ನು ಹಾಡುವ ಮೂಲಕ ಕವಿಗೋಷ್ಠಿಗೆ ಚಾಲನೆ ನಿಡಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ಕಾರ್ಯಕ್ರಮ ನಿರೂಪಿಸಿದರೆ ಶಿಕ್ಷಕ ದೇವಿದಾಸ ನಾಯ್ಕ ವಂದಿಸಿದರು. ಕವಿಗೋಷ್ಠಿಯಲ್ಲಿ ನೂರಾರುಜನರು ಉಪಸ್ಥಿತರಿದ್ದರು.