ಕಾರವಾರ: ಉತ್ತರಕನ್ನಡ ಜಿಲ್ಲೆಯ ಹಲವಾರು ಧಾರ್ಮಿಕ ಸಂಸ್ಥೆಗಳು ಹಾಗೂ ಶೃದ್ಧಾ ಕೇಂದ್ರಗಳಿಗೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಸ್ವಚ್ಛತೆಯ ಬಗ್ಗೆ ಗಮನ ವಹಿಸಬೇಕಾಗಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸುವಂತೆ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ ಆದೇಶ ಹೊರಡಿಸಿದ್ದಾರೆ.
ಪ್ಲಾಸ್ಟಿಕ್‍ನಿಂದ ತಯಾರಿಸಿದ ಕ್ಯಾರಿಬ್ಯಾಗ್, ತಟ್ಟೆ, ಲೋಟ, ಬಟ್ಟಲು, ಬ್ಯಾನರ್ಸ್, ಬಂಟಿಂಗ್ಸ್ ವಸ್ತುಗಳನ್ನು ಧಾರ್ಮಿಕ ಸಂಸ್ಥೆಯ ಆವರಣದಲ್ಲಿ ಮುಂತಾದ ಕಡೆಗಳಲ್ಲಿ ನಿಷೇಧಿಸಿದೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂಬ ಫಲಕಗಳನ್ನು ಅಳವಡಿಸುವುದು ಅವಶ್ಯ ಎಂದು ಸೂಚಿಸಿದೆ.
ಹಬ್ಬ ಹರಿದಿನ ಹಾಗೂ ಜಾತ್ರೆಯ ಸಂದರ್ಭಗಳಲ್ಲಿ ಪೂಜಾ ಸಾಮಗ್ರಿಗಳಿಗಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಜಾಹಿರಾತು ನೀಡಲು ಬ್ಯಾನರ್ ಮತ್ತು ಬಂಟಿಂಗ್ಸ್, ಪ್ರಸಾದÀ ವಿತರಿಸಲು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಉಪಯೋಗಿಸದೇ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸುವಂತೆ ಕೋರಿದೆ.
ಸೂಚನೆಗಳನ್ನು ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.