ಕುಮಟಾ: ಮೀನಿನ ತ್ಯಾಜ್ಯದ ನೀರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡುತ್ತ ಸಂಚರಿಸುತ್ತಿದ್ದ ಮೀನಿನ ಲಾರಿಯನ್ನು ಪಟ್ಟಣದ ಹೊಸ ಬಸ್‍ನಿಲ್ದಾಣದ ಬಳಿ ತಡೆದ ಯುವಕರು ಲಾರಿಯನ್ನು ಪೊಲೀಸರ ವಶಕ್ಕೆ ನೀಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಗೋವಾದಿಂದ ಕೇರಳಕ್ಕೆ ಹೊರಟ್ಟಿದ ಮೀನು ತುಂಬಿದ ಲಾರಿಯು ಮಿರ್ಜಾನ್‍ನಿಂದ ತ್ಯಾಜ್ಯದ ನೀರನ್ನು ಬಿಡಲಾರಂಭಿಸಿದೆ. ಇದನ್ನು ಗಮನಿಸಿದ ಮಿರ್ಜಾನಿನ ಕೆಲ ಯುವಕರು ಲಾರಿ ಚಾಲಕನಿಗೆ ಮೀನಿನ ದುರ್ವಾಸನೆ ಭರಿತ ನೀರನ್ನು ಜನ ವಸತಿ ಪ್ರದೇಶದಲ್ಲಿ ಬಿಡದಂತೆ ತಿಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಲಾರಿ ಕ್ಲೀನರ್ ಯುವಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವಕರು ಲಾರಿಯನ್ನು ಹಿಂಬಾಲಿಸಿಕೊಂಡು ಬಂದು, ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಲಾರಿಯನ್ನು ತಡೆದಿದ್ದಾರೆ.
ಈ ಸಂದರ್ಭದಲ್ಲಿ ಯುವಕರು ಮತ್ತು ಲಾರಿ ಚಾಲಕನ, ಕ್ಲೀನರ್ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕಾಗಮಿಸಿದ ಕುಮಟಾ ಪೊಲೀಸರು ಯುವಕರನ್ನು ಸಮಾಧಾನಪಡಿಸಿ, ಲಾರಿ ಸಮೇತ ಚಾಲಕ ಮತ್ತು ಕ್ಲೀನರ್‍ನನ್ನು ವಶಕ್ಕೆ ಪಡೆದಿದ್ದಾರೆ.