ಭಟ್ಕಳ: ರಾತ್ರಿ ವೇಳೆ ಬೆಂಗಳೂರು ಹಾಗೂ ಹೊರ ಜಿಲ್ಲೆಗಳಿಗೆ ಸಂಚರಿಸುವ ಖಾಸಗಿ ಬಸ್ಗಳ ಕಚೇರಿ ಹಾಗೂ ಬಸ್ಗಳ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಖಾಸಗಿ ಬಸಗಳ ಟಿಕೆಟ್ ದರ ದುಪ್ಪಟ್ಟು ಸಂಗ್ರಹದ ವಿರುದ್ಧ ದೂರು ಸಲ್ಲಿಕೆಯಾಗಿತ್ತು. ಇದರಿಂದ ಜಿಲ್ಲಾಧಿಕಾರಿಗಳು ತಹಶೀಲ್ದಾರ್ಗೆ ಪರಿಶೀಲಿಸುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆ ಕಚೇರಿ ಹಾಗೂ ಬಸ್ಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಹೆದ್ದಾರಿ ಪಕ್ಕದಲ್ಲಿ ಸಂಚಾರಕ್ಕೆ ಸಿದ್ಧವಿದ್ದ 4-5 ಖಾಸಗಿ ಬಸ್ಗಳನ್ನು ಹತ್ತಿ ಚಾಲಕ ಹಾಗೂ ಕಂಡಕ್ಟರ್ ಬಳಿ ಬಸ್ನಲ್ಲಿ ನಿಗದಿಯಾದ ದರದ ಪಟ್ಟಿ ಪಡೆದು ಪರಿಶೀಲನೆ ನಡೆಸಿದರು. ಬಳಿಕ ಬಸ್ನಲ್ಲಿದ್ದ ಪ್ರಯಾಣಿಕರೋರ್ವರನ್ನು ಬಸ್ ದರದ ಬಗ್ಗೆ ವಿಚಾರಿಸಿದ ತಹಶೀಲ್ದಾರ್ ವಿ.ಪಿ.ಕೊಟ್ರಳ್ಳಿ ಎಲ್ಲಾ ಬಸ್ ಚಾಲಕ, ನಿರ್ವಾಹಕರಿಗೆ ಕನಿಷ್ಠ ದರ ಮಾತ್ರ ಪಡೆಯುವಂತೆ ಖಡಕ್ ಎಚ್ಚರಿಕೆ ನೀಡಿದರು.
ನಂತರ ಖಾಸಗಿ ಬಸ್ ಕಚೇರಿಗಳಿಗೆ ತೆರಳಿ ಅಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿದರು.ಖಾಸಗಿ ಬಸ್ಗಳ ಮೇಲೆ ಅಧಿಕಾರಿಗಳ ದಾಳಿ ಜಿಲ್ಲಾಧಿಕಾರಿಗಳ ಬಳಿ ದರ ದುಪ್ಪಟ್ಟು ಪಡೆದಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಮತ್ತೊಮ್ಮೆ ಟಿಕೆಟ್ ದರದಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಜಿಲ್ಲಾಧಿಕಾರಿಗಳು ಮುಂದಿನ ಕಾನೂನು ಕ್ರಮಕ್ಕೆ ಎಚ್ಚರಿಕೆ ನೀಡಿರುವ ಬಗ್ಗೆ ಖಾಸಗಿ ಬಸ್ ಕಚೇರಿ ಸಿಬ್ಬಂದಿಗಳಿಗೆ ತಿಳಿಸಿ, ಎಚ್ಚರಿಕೆ ನೀಡಿ ಅಧಿಕಾರಿಗಳು ತೆರಳಿದ್ದಾರೆ