ಕಾರವಾರ : ‘ಕುಟುಂಬಗಳು ವಿಭಜನೆಯಾಗುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ ಕೌಟುಂಬಿಕ ರಕ್ಷಣೆ ಸವಾಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಹೇಳಿದರು.
ಅವರು ಬುಧವಾರ ನಗರದ ಸ್ತ್ರೀ ಶಕ್ತಿ ಸಭಾಭವನದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಸುರಕ್ಷತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ನಾವು ಸ್ವಾವಲಂಬಿಗಳಾಗಬೇಕು. ನಾವು ಮತ್ತೊಬ್ಬರನ್ನು ಜಾಸ್ತಿ ಅವಲಂಬಿಸಿದಾಗ ಅದು ಹತಾಶೆ, ಕೋಪಕ್ಕೆ ತಿರುಗುತ್ತದೆ. ಇದರಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ’ ಎಂದು ಕಿವಿಮಾತು ಹೇಳಿದರು.
‘ನಮಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಮುಂಜಾನೆ ವ್ಯಾಯಾಮ ಮಾಡುವುದರಿಂದ ಲವಲವಿಕೆಯಿಂದಿರಬಹುದು’ ಎಂದು ಸಲಹೆ ನೀಡಿದರು.
ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರವೀಣ ಪಾಟೀಲ ಮಾತನಾಡಿ, ‘ವ್ರದ್ಧಾಶ್ರಮಗಳು ಜಾಸ್ತಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಕ್ಕಳು ಪಾಲಕರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.
ವಕೀಲರಾದ ಕೆ.ಬಿ. ನಾಯ್ಕ, ‘ಪೋಷಕರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ಶ್ರೇಯೋಭಿವ್ರದ್ಧಿ ಕಾಯಿದೆಯ ಬಗ್ಗೆ ಉಪನ್ಯಾಸ ನೀಡಿದರು. ‘ಮಕ್ಕಳಿಂದ ದೌರ್ಜನ್ಯ ನಡೆದರೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಬಹುದು’ ಎಂದು ಸೂಚಿಸಿದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವ್ರದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್, ಮಲ್ಲಿಕಾರ್ಜುನ ಜನಸೇವಾ ಸಂಘ ಬೆಳಗಾವಿ ಶಾಖೆ ಅಧ್ಯಕ್ಷ ಮಲ್ಲಿಕಾರ್ಜುನ ಖೋತ, ವಕೀಲ ಎ.ಆರ್.ಬಿ. ಡಿಸೋಜಾ ಇದ್ದರು. ರಾಜುಗೋಪಾಲ ಸ್ವಾಗತಿಸಿದರು. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.