ಕಾರವಾರ: ‘ಸ್ವಾತಂತ್ರ‍್ಯ, ಸಮಾನತೆ, ಸ್ವರಾಜ್ಯ ಮತ್ತು ಸ್ವಚ್ಛತೆ ಎಂಬ ನಾಲ್ಕು ‘ಸ’ಕಾರಗಳನ್ನು ಗಾಂಧಿ ಅನುಸರಿಸಿದ್ದರು. ಬಿಜೆಪಿಯ ಸಂಘಟನೆ ಇವೆಲ್ಲವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ’ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.


ನಗರದ ಆಶ್ರಮ ರಸ್ತೆಯಲ್ಲಿರುವ ಹಳದೀಪುರಕರ್ ಕುಟುಂಬದ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಬುಧವಾರ ಅವರು ಮಾತನಾಡಿದರು.
‘ಇತಿಹಾಸವೆಂದರೆ ಊಹೆಗೆ ನಿಲುಕದ್ದು ಎಂದುಕೊಳ್ಳುತ್ತೇವೆ. ಕಣ್ಣೆದುರಿನ ಘಟನೆಯ ಕಲ್ಪನೆಯೂ ನಮಗಿರುವುದಿಲ್ಲ. ಗಾಂಧಿಯವರನ್ಮು ಸತ್ಕರಿಸಿದ ಹಳದೀಪುರಕರ್ ಕುಟುಂಬವನ್ನು ಸ್ಮರಿಸಲೇಬೇಕಾಗಿರುವುದು’ ಎಂದರು.


‘ಸ್ವಾತಂತ್ರ‍್ಯ ಬಂದ ನಂತರ, ಗಾಂಧಿ ನಿಧನದ ನಂತರ ಹುಸಿ ಗಾಂಧಿವಾದದ ದೊಡ್ಡ ಮೇಳ ಶುರುವಾಯಿತು. ಅವರ ತತ್ವ, ನಿಷ್ಠೆಗಳನ್ನು ಪಾಲಿಸದೇ, ರಾಜಕೀಯವಾಗಿ ಅವರ ಹೆಸರನ್ನು ಬಳಸಿಕೊಂಡರು. ಇದನ್ನೇ ಜನರಿಗೂ ನಂಬಿಸುತ್ತಾ ಬಂದರು. ಅದು ಜನರ ಅರವಿಗೂ ಬರಲಿಲ್ಲ. ಗಾಂಧೀಜಿ ದೇಶದಲ್ಲಿ ರಾಮರಾಜ್ಯದ ಕನಸು ಕಂಡಿದ್ದರು. ಆದರೆ, ಒಂದು ದೇವಸ್ಥಾನ ಕಟ್ಟುವುದರಿಂದ ರಾಮರಾಜ್ಯ ಸ್ಥಾಪನೆ ಆಗುವುದಿಲ್ಲ’ ಎಂದೂ ಹೇಳಿದರು.
‘ಪ್ರಧಾನಿ ಮೋದಿಯವರು ತೆಗೆದಕೊಂಡಿರುವ ಕ್ರಾಂತಿಕಾರಕ ಹೆಜ್ಜೆಯನ್ನು ಈ ಹಿಂದೆ ಯಾರೂ ತೆಗೆದುಕೊಂಡಿರಲಿಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಳ್ಳುವಂಥ ಅವರ ಗುಣ ಜಗತ್ತಿನ ಯಾವ ರಾಜಕಾರಣಿಯಲ್ಲಿಯೂ ಇಲ್ಲ’ ಎಂದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಕಾರವಾರದಲ್ಲಿ ಗಾಂಧೀಜಿಯವರ ನೆನಪುಗಳನ್ನು ಸ್ಮರಿಸಲು ಇರುವ ಏಕೈಕ ಕುರುಹು ಎಂದರೆ ಅದು ಹಳದೀಪುರಕರ್ ಕುಟುಂಬದ ಮನೆ. ಅಸ್ಪೃಶ್ಯತೆಯ ಬಗ್ಗೆ ಹೋರಾಡಿದ್ದ ಗಾಂಧಿ, ಸಮಾನತೆಯ ಸಂದೇಶ ಸಾರಿದ್ದರು.

RELATED ARTICLES  ಬರಗದ್ದೆ ಸಹಕಾರಿ ಸಂಘ ಚುನಾವಣೆಯ ಫಲಿತಾಂಶ ಪ್ರಕಟ

ಕಾಂಗ್ರೆಸ್‌ನವರು ಗಾಂಧಿಯವರ ಫೊಟೊ ಇಟ್ಟು ಪೂಜಿಸಿ ನಾಟಕ ಮಾಡಿದರು. ಆದರೆ, ಅವರ ತತ್ವ ಸಿದ್ಧಾಂತಗಳನ್ನು ಈವರೆಗೂ ಪಾಲಿಸಿಲ್ಲ. ಪ್ರಧಾನಿ ಮೋದಿಯವರೇ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲರೂ ಗಾಂಧಿಯವರ ಒಳ್ಳೆಯ ಗುಣಗಳನ್ನು ಅನುಸರಿಸಬೇಕು’ ಎಂದು ಕರೆ ನೀಡಿದರು.

RELATED ARTICLES  ಭಟ್ಕಳ ರೋಟರಿ ಕ್ಲಬ್ ಪದ ಗ್ರಹಣ ಹಾಗೂ ರೋಟರಿ ಸಂಚಿಕೆ ಬಿಡುಗಡೆ.


ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ, ವಾಕರಾರಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾ ಕಮಿಟಿಯ ಶ್ರೀ ವಿನೋದ ಪ್ರಭು, ಶ್ರೀ. ಎನ್ .ಎಸ್. ಹೆಗಡೆ, ಶ್ರೀ ಜಿ.ಜಿ.ಹೆಗಡೆ, ಶ್ರೀ ವೆಂಕಟೇಶ ನಾಯಕ, ಶ್ರೀ ಗಜಾನನ ಗುನಗಾ, ಕಾರವಾರ ನಗರಾಧ್ಯಕ್ಷ ಶ್ರೀ ಮನೋಜ ಭಟ್ , ಗ್ರಾಮೀಣಾಧ್ಯಕ್ಷ ಶ್ರೀ ಮಾರುತಿ ನಾಯ್ಕ, ಶ್ರೀ ನಾಗರಾಜ ನಾಯಕ, ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಹಾಜರಿದ್ದರು.