ಬೆಂಗಳೂರು: ನಕಲಿ ಅಶ್ಲೀಲ ಸಿಡಿ ತಯಾರಿಸಿ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಮಾನಹಾನಿಗೆ ಯತ್ನಿಸಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕುಮಟಾ ಜೆಎಂಎಫ್‍ಸಿ ನ್ಯಾಯಾಲಯ ಐವರು ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ಶ್ರೀಗಳ ತೇಜೋವಧೆ ಮಾಡುವ ಉದ್ದೇಶದಿಂದ 2010ರಲ್ಲಿ ದುಷ್ಟಕೂಟ ಕಟ್ಟಿಕೊಂಡು ನಕಲಿ ಅಶ್ಲೀಲ ಸಿಡಿ ತಯಾರಿಸಿ ಪೂಜ್ಯ ಸ್ವಾಮೀಜಿಯವರ ತೇಜೋವಧೆ ಯತ್ನ ನಡೆದಿತ್ತು. ಶ್ರೀಗಳನ್ನು ಹೋಲುವ ವ್ಯಕ್ತಿಯನ್ನು ಬಳಸಿ ಶ್ರೀಗಳ ಹಾವಭಾವಗಳನ್ನು ಆತನಿಗೆ ಕಲಿಸಿ ಚಿತ್ರಿಸಲಾಗಿತ್ತು. ಹಾಲಿವುಡ್ ತಂತ್ರಜ್ಞಾನ ಬಳಸಿ ಶ್ರೀಗಳ ಚಿತ್ರಗಳನ್ನು ಅಶ್ಲೀಲ ವಿಡಿಯೊಗಳ ಜತೆ ಸೇರಿಸಿ ಅದನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಶ್ರೀರಾಮಚಂದ್ರಾಪುರ ಮಠದ ಶ್ರೀಗಳ ಕೀರ್ತಿಗೆ ಮಸಿ ಬಳಿಯುವ ಕೃತ್ಯ ಎಸಗಲಾಗಿತ್ತು.
ಈ ಷಡ್ಯಂತ್ರ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಗೋಪಾಲ್ ಹೊಸೂರ್ ನೇತೃತ್ವದ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ರೆಡ್‍ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದರು.
ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಕುಮಟಾ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಆರೋಪ ದೃಢಪಡಿಸುವ (ಚಾರ್ಜ್ ಫ್ರೇಮಿಂಗ್) ಪ್ರಕ್ರಿಯೆ ನಡೆದಿದೆ.
ಕಲಾಪಕ್ಕೆ ಹಾಜರಾಗದ ಬಾಲಚಂದ್ರ ಪ್ರಭಾಕರ ಕುಡ್ಲೇಕರ, ಗಜಾನನ ಶಾಂಬಾ ಉಪಾಧ್ಯಾಯ ಅಲಿಯಾಸ್ ದೀಕ್ಷಿತ, ಶಿವರಾಮ ವಿನಾಯಕ ಅಡಿ, ವಿಶ್ವನಾಥ್ ಅಲಿಯಾಸ್ ವಿಶು ಫಣಿರಾಮ ಗೋಪಿಭಟ್ಟ, ರಾಜು ಅಲಿಯಾಸ್ ರಾಜಗೋಪಾಲ ಮಹಾದೇವ ಅಡಿ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.