ಭಟ್ಕಳ: ತಾಲೂಕಿನ ಶಾನಭಾಗ ರೆಸಿಡೆನ್ಸಿ ಲಾಡ್ಜಿಂಗ್ & ಬೋರ್ಡಿಂಗ್ ನ 114 ಕೋಣೆಯಲ್ಲಿ ಐವರ ತಂಡವೊಂದು ಯುವಕನನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು ಇದು ಜನರಲ್ಲಿ ಭಯ ಹುಟ್ಟಿಸಿದೆ.
ಈ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ನಾಲ್ವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕೊಲೆಯಾಗಿರುವ ಯುವಕನನ್ನು ಪುರವರ್ಗ ಪಂಚಾಯತ್ ವ್ಯಾಪ್ತಿಯ ಮುಗ್ಲಿಹೊಂಡ ನಿವಾಸಿ ಅಫ್ಫಾನ್ ಜಬಾಲಿ ಬಿನ್ ನವರಂಗ್ ಮುಹಮ್ಮದ್ ಅಲಿ ಎಂದು ಗುರುತಿಸಲಾಗಿದೆ.ಯುವಕನ ಕೊಲೆ ಯಾತಕ್ಕಾಗಿ ನಡೆಯಿತು? ಹಣ ವ್ಯವಹಾರವೇನಾದರೂ ಇದರಲ್ಲಿ ಕೆಲಸ ಮಾಡಿರಬಹುದೇ? ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ವಿವರ ಪೊಲೀಸ್ ತನಿಖೆಯಿಂದಲೇ ತಿಳಿದುಬರಬೇಕಾಗಿದೆ.
ಮೃತ ಯುವಕನ ಸಹೋದರ ನಬೀಲ್ ನೀಡಿದ ಮಾಹಿತಿಯಂತೆ, 9.30 ಸುಮಾರು ತನ್ನ ಸಹೋದರ ಅಪ್ಫಾನ್‍ನಿಂದ ತನ್ನ ಮೊಬೈಲ್‍ಗೆ ಕರೆ ಬಂದಿದ್ದು ನನಗೆ ಲಾಡ್ಜ್ ನಲ್ಲಿ ಕೂಡಿ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದು ನಾನು ಲಾಡ್ಜಿಗೆ ತಲುವಷ್ಟರಲ್ಲಿ ನನ್ನ ಸಹೋದರ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದ ನನ್ನನ್ನು ನೋಡಿದ ತಕ್ಷಣ ನಾಲ್ವರು ಪರಾರಿಯಾಗಿದ್ದಾರೆ ಇನ್ನೋರ್ವ ಇಲ್ಲೆ ಕೆಳಗಡೆ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ನೀಡಿದ್ದಾನೆ. ಘಟನೆಯ ಸುದ್ದಿ ಕಾಡ್ಗಿಚ್ಚಿನಂತೆ ಊರು ತುಂಬ ಹರಡಿಕೊಂಡಿದ್ದು ಸಾವಿರಾರು ಮಂದಿ ಲಾಡ್ಜ್ ಮುಂದೆ ಸೇರಿದ್ದು ಜನರನ್ನು ಚದುರಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಪಡುವಂತಾಯಿತು.
ಸಹಾಯಕ ಪೊಲೀಸ್ ಅಧೀಕ್ಷ ನಿಖಿಲ್, ಪಿ.ಎಸ್.ಐ ಕುಡಗುಂಡಿ ಮತ್ತಿತರ ಪೊಲೀಸ್ ಅಧಿಕಾರಿಗಳು ಹಾಗೂ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಮುಖಂಡರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.