ಕುಮಟಾ: ಬಗಲಲ್ಲಿ ಚೀಲ ಹಿಡಿದು, ಗಡ್ಡ ಬಿಟ್ಟು ಓಡಾಡಿದರೆ ಸಾಹಿತಿಯಾಗಲಾರ. ಸಾಹಿತಿಗೆ ಮೊದಲು ಮಾನವೀಯತೆ ಬೇಕು. ಉತ್ತಮ ಮನುಷ್ಯತ್ವವನ್ನು ಅರಿತುಕೊಂಡರೆ ಮಾತ್ರ ನಿಜವಾದ ಸಾಹಿತಿಯಾಗುತ್ತಾನೆ ಎಂದು ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ, ಕಲಾವಿದ ಹಾಗೂ ರಂಗಕರ್ಮಿ ಕಾಸರಗೋಡು ಚಿನ್ನಾ ಅಭಿಪ್ರಾಯಪಟ್ಟರು.
ಸತ್ವಾಧಾರ ಫೌಂಡೇಶನ್(ರಿ) ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕುಮಟಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಮಟಾ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡ ಭಾಷಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವೀಯತೆಯ ನೆಲಗಟ್ಟಿನಲ್ಲಿ ರಚಿಸಿದ ಸಾಹಿತ್ಯಕ್ಕೆ ಹೆಚ್ಚಿನ ಬೆಲೆಯಿದೆ. ಕಾಸರಕೋಡ ಎಂದೆಂದಿಗೂ ಕನ್ನಡ ನೆಲವೇ, ನನಗೆ ಕನ್ನಡ ಹಾಗೂ ಕೊಂಕಣಿ ಎರಡು ಭಾಷೆಯೂ ಕೂಡ ಮುಖ್ಯವಾಗಿದೆ. ಆದರೂ ನಾನು ಕೇರಳಕ್ಕಿಂತ ಕರ್ನಾಟಕವನ್ನು ಹೆಚ್ಚು ಪ್ರೀತಿಸುವೆ. ಹೀಗಾಗಿ ನನ್ನ ಪ್ರಯಾಣವು ಕಾಸರಕೋಡು ಟು ಬೆಂಗಳೂರಾಗಿದೆ. ನನ್ನನ್ನು ಪ್ರಶ್ನಿಸಿದವರಿಗೆ ಹೇಳಿದ್ದೇನೆ. ಮಗು ಯಾವತ್ತಿದ್ದರೂ ತಾಯಿಯೊಂದಿಗೆ ಇರುತ್ತದೆಯೇ ವಿನಃ ಮಲತಾಯಯೊಂದಿಗಲ್ಲ ಎಂದಿರುವುದನ್ನು ಸ್ಮರಿಸಿದರು.
ಅಕಾಡೆಮಿಗಳಲ್ಲಿ ಜಾತಿಯ ಆಧಾರದ ಮೇಲೆ ಅಧಿಕಾರ ನೀಡುವ ಕೆಟ್ಟ ಪದ್ಧತಿಗಳಿರುವುದಕ್ಕೆ ಬೇಸರವಾಗುತ್ತಿದೆ. ಸಾಂಸ್ಕøತಿಕ ನೆಲಗಟ್ಟು ಇನ್ನಷ್ಟು ಗಟ್ಟಿಯಾಗಬೇಕಾದರೆ ಅಕಾಡೆಮಿಗಳಲ್ಲಿ ಕೆಲವರಾದರೂ ಸ್ಥಾನವನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಕುಮಟಾ ಸಾಕಷ್ಟು ಹಿಂದಿದ್ದು, ತಮ್ಮ ಗಟ್ಟಿತನವನ್ನು ಪ್ರದರ್ಶಿಸಿ, ಅಕಾಡೆಮಿಯಲ್ಲಿ ಸ್ಥಾನ ಪಡೆಯುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಹಾಗೂ ಕೊಂಕಣ ಎಜುಕೇಷನ್ ಟ್ರಸ್ಟ್‍ನ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ, ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಭಾಷೆ ಮುಂದಿನ ಅಳಿವಿನಂಚನ್ನು ತಲುಪಲಿದೆ ಎಂಬ ಬೇಸರ ಕಾಡುತ್ತಿದೆ. ಭಾಷೆ ಕೇವಲ ಶಬ್ದ ಜೋಡಣೆಗೆ ಮಾತ್ರ ಸೀಮಿತವಲ್ಲ. ಬದಲಾಗಿ ಸಂಸ್ಕøತಿ, ಸಂಸ್ಕಾರ ಹಾಗೂ ಇತಿಹಾಸವನ್ನು ತಿಳಿಸುವ ಸಾಧನ ಎಂದ ಅವರು, ಭಾಷೆಗಳು ಮನಸ್ಸಿನ ಅಂತರಗದಲ್ಲಿರಬೇಕೇ ವಿನಃ ಅದು ನಮ್ಮ ಮನಸ್ಸನ್ನು ದೂರ ಮಾಡಬಾರದು. ಭಾಷೆ ಹಾಗೂ ಜನರನ್ನು ಬೆÉಸೆಯುವ ಭಾಷಾಂತರಂಗ ಕಾರ್ಯಕ್ರಮವನ್ನು ಸಂಯೋಜಿಸಿರುವ ಸತ್ವಾಧಾರ ಫೌಂಡೇಶನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕುಮಟಾ ಇವರ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಮುಕ್ತ ಸಂವಾದದಲ್ಲಿ ಕಾಸರಗೋಡು ಚಿನ್ನಾ ಅವರ ಜೊತೆಗೆ ಭಾಷಾ ಬಾಂಧವ್ಯ ಹಾಗೂ ಪ್ರಸ್ತುತ ಸಮಸ್ಯೆಗಳ ಕುರಿತಾಗಿ ಚರ್ಚಿಸಲಾಯಿತು. ಕನ್ನಡ ಹಾಗೂ ಕೊಂಕಣಿ ಭಾಷಿಕರ ನಡುವಿನ ಬಾಂಧವ್ಯ ಹಾಗೂ ಭಾಷೆ ಭಾಷೆಗಳ ನಡುವೆ ಇರಬೇಕಾದ ಸಂಬಂಧಗಳ ಕುರಿತು ಹಾಗೂ ಭಾಷಾ ಬಾಂಧವ್ಯದ ಕುರಿತಾಗಿ ಮುಕ್ತ ಚರ್ಚೆ ನಡೆಯಿತು.
ಭಾಷಾಂತರಂಗ ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕøತೆ ಜಾಹ್ನವಿ ಹೆಗಡೆ ನೆರವೇರಿಸಿ, ಶುಭ ಹಾರೈಸಿದರು. ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಉಪಸ್ಥಿತರಿದ್ದರು.
ಕೊಂಕಣಿ ಹಾಗೂ ಕನ್ನಡ ಗೀತೆಗಳನ್ನು ವಿದ್ಯಾರ್ಥಿಗಳು ಪ್ರಚುರಪಡಿಸಿದರು. ಡಾ ಶ್ರೀಧರ ಗೌಡ ಉಪ್ಪಿನಗಣಪತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರ ಭಟ್ ಸೂರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಯದೇವ ಬಳಗಂಡಿ ಕಾರ್ಯಕ್ರಮ ನಿರೂಪಿಸಿದರು. ಸಂಘಟಕರಾದ ಗಣೇಶ ಜೋಶಿ ವಂದಿಸಿದರು. ಚಿದಾನಂದ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು.