ಕುಮಟಾ: ಉತ್ತರಕನ್ನಡ ಜಿಲ್ಲೆ ಪ್ರತಿಭೆಗಳ ಆಗರ. ಅದರಲ್ಲಿಯೂ ಕುಮಟಾ ತಾಲೂಕು ರಾಜ್ಯಮಟ್ಟದಲ್ಲಿ ಗುರುತಿಸುವಂತಹ ಪ್ರತಿಭಾನ್ವಿತ ಕಲಾವಿದರನ್ನು ಹೊಂದಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ ಭಟ್ಕಳದ ಝೇಂಕಾರ ಮೆಲೋಡಿಸ್ ಕಲಾ ಸಂಘ ಇವರ ಸಹಕಾರದೊಂದಿಗೆ ಪಟ್ಟಣದ ರೋಟರಿ ನಾದಶ್ರೀ ಕಲಾ ಕೇಂದ್ರದಲ್ಲಿ ಭಾನುವಾರ ಸಾಯಂಕಾಲ ಜರುಗಿದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಪ್ರಸನ್ನ ಪ್ರಭು ನೇತೃತ್ವದ ಝೇಂಕಾರ ಕಲಾ ಸಂಘವು ಹಲವಾರು ವರ್ಷಗಳಿಂದ ಅನೇಕ ಕಲಾವಿದರನ್ನು ಗುರುತಿಸಿ, ಉತ್ತಮ ವೇದಿಕೆ ಕಲ್ಪಿಸುತ್ತಿದೆ. ಕಾರ್ಯಕ್ರಮಗಳು ಕೇವಲ ಕಾಟಾಚಾರಕ್ಕಾಗಿ ಸೀಮಿತವಾಗದೇ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವಂತದ್ದಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆರ್ಥಿಕ ಧನ ಸಹಾಯದ ಜೊತೆಗೆ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದ ಅವರು, ಕಳೆದ 3 ವರ್ಷಗಳಿಂದ ತಾಲೂಕಿನ ಸುಗ್ಗಿ ಕಲಾವಿದರಿಗೆ ದೊರೆಯದ ಮಾಶಾಸನ ಹಣವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂಬ ಆತ್ಮ ಸಂತೋಷ ನನಗಿದೆ. ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನನ್ನಿಂದಾದ ಸಹಾಯ ಮತ್ತು ಸಹಕಾರ ನೀಡುತ್ತೇನೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ಭಟ್ಟ ಮಾತನಾಡಿ, ರೋಟರಿ ಸಂಸ್ಥೆಯು ಕೇವಲ ಸಾಮಾಜಿಕ ಕಾರ್ಯಕ್ಕೆ ಸೀಮಿತವಾಗಿರದೇ, ಅನೇಕ ಸಾಂಸ್ಕøತಿಕ ಚಟುವಟಿಕೆಗಳನ್ನೂ ಹಮ್ಮಿಕೊಳ್ಳುತ್ತಿದ್ದು, ಕಲೆಯ ಜೀವಂತಿಕೆಗೆ ಶ್ರಮಿಸುತ್ತಿದೆ. ಕಲಾವಿದರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲ್ಲ ಸಂಘ-ಸಂಸ್ಥೆಗಳು ಕೈಜೋಡಿಸಬೇಕು. ರೋಟರಿಯ ನಾದಶ್ರೀ ಕಲಾ ಕೇಂದ್ರವನ್ನು ಸಾಂಸ್ಕ್ರತಿಕ ಚಟುವಟಿಕೆಗಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.