ಕುಮಟಾ : ಕೆನರಾ ವೆಲ್‍ಫೇರ್ ಟ್ರಸ್ಟ್, ಅಂಕೋಲಾ, ಸಿಸ್ಕೋ ಸಂಭ್ರಮ ಬೆಂಗಳೂರು, ಯೂಥ್ ಫಾರ್ ಸೇವಾ ಬೆಂಗಳೂರು ಹಾಗೂ ಜನತಾ ವಿದ್ಯಾಲಯ ಕಡತೋಕಾದ ಸಂಯುಕ್ತ ಆಶ್ರಯದಲ್ಲಿ ಗಿಬ್ ಪ್ರೌಢಶಾಲೆ ಕುಮಟಾದಲ್ಲಿ ಎನ್.ಟಿ.ಎಸ್.ಇ. “ಉನ್ನತಿ” ಶಿಬಿರವು ದಿನಾಂಕ: 14-10-2019 ರಂದು ಸಂಪನ್ನಗೊಂಡಿತು. ಕಾರ್ಯಕ್ರಮದ ಅತಿಥಿಗಳೂ ಜಿಮ್ಯಾಟ್ ಸಂಪನ್ಮೂಲ ವ್ಯಕ್ತಿಗಳೂ ಆದಂತಹ ಪ್ರೊ|| ಎಸ್.ಎ. ಭಟ್ಟರು ಸತತ ಸಾಧನೆಯಿಂದ ಎನ್.ಟಿ.ಎಸ್.ಇ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಧ್ಯಕ್ಷರಾದ ಮುಖ್ಯಾಧ್ಯಾಪಕ ಶ್ರೀ ಡಿ.ಜಿ. ಶಾಸ್ತ್ರಿಯವರು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕುಮಟಾ ಮತ್ತು ಹೊನ್ನಾವರ ತಾಲೂಕಿನ ಆಯ್ದ ಪ್ರತಿಭಾನ್ವಿತ ಮಕ್ಕಳಿಗೆ ಮೇ ತಿಂಗಳಲ್ಲಿ ಒಂದು ವಾರ ತರಬೇತಿ ನೀಡಿ ಮುಂದುವರಿದು ಪ್ರತಿ ತಿಂಗಳು ಎರಡು ಭಾನುವಾರದಂತೆ ತರಬೇತಿಯನ್ನು ನೀಡುತ್ತಾ ಬಂದು ಅಕ್ಟೋಬರದಲ್ಲಿ ಪುನಃ ಒಂದು ವಾರ ಸೇರಿದಂತೆ 25 ದಿನಗಳ ತರಬೇತಿಯನ್ನು ನೀಡಿರುವುದು ವಿಶೇಷವಾಗಿತ್ತು.
ಕುಮಟಾ ಮತ್ತು ಹೊನ್ನಾವರ ತಾಲೂಕಿನ ಅನೇಕ ಪ್ರತಿಭಾನ್ವಿತ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಉಷಾ ಭಟ್ ಸ್ವಾಗತಿಸಿದರೆ ಶ್ರೀ ಎಂ.ಜಿ. ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು.
ಸಂಪನ್ಮೂಲ ಶಿಕ್ಷಕರಾದ ಶ್ರೀ ವಿ.ಪಿ. ಶಾನಭಾಗ ಮತ್ತು ಶ್ರೀ ವಿಜಯಕುಮಾರ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಶ್ರೀ ಜಿ.ಎಸ್. ಭಟ್ ನಿರೂಪಿಸಿದರು. ಶ್ರೀಮತಿ ಶುಭಾ ಭಟ್ಟರು ವಂದಿಸಿದರು.