ಹೊನ್ನಾವರ: ತಾಲೂಕಿನ ಕರ್ಕಿಯ ದಯಾನಂದ ವಿದ್ಯಾಭಾರತಿ ಗುರುಕುಲದಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಂದು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ಪೂರ್ವದಲ್ಲಿ ನಾಗರಾಜ ನಾಯಕ ತೊರ್ಕೆಯವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೇಶಭಕ್ತಿಯ ಮನೋಭಾವನೆ ಬೆಳೆಸಬೇಕು ಹಾಗೂ ಮಕ್ಕಳಲ್ಲಿ ಒಂದಲ್ಲಾ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಆಯ್ಕೆ ಮತ್ತು ಅಭಿಪ್ರಾಯಕ್ಕೆ ಮಾನ್ಯತೆ ನೀಡಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು. ಸರಕಾರದ ಯಾವುದೇ ಅನುದಾನವಿಲ್ಲದೇ ಇದ್ದರೂ ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಈ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ನುಡಿದು ಮುಂದಿನ ದಿನಗಳಲ್ಲೂ ಈ ಸಂಸ್ಥೆಗೆ ತಮ್ಮ ಸಹಾಯ ಸಹಕಾರವಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾದ ನಿವೃತ್ತ ಉಪನ್ಯಾಸಕ ಜಿ.ಎಚ್.ನಾಯ್ಕರವರು ಮಾತನಾಡಿ ಪ್ರತಿಭೆಗಳನ್ನು ಹುರಿದುಂಬಿಸುವುದರೊಂದಿಗೆ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ನಾಗರಾಜ ನಾಯಕ ತೊರ್ಕೆಯವರ ಕಾರ್ಯವನ್ನು ಶ್ಲಾಘಿಸಿ ಅವರಿಂದ ಸ್ಫೂರ್ತಿಗೊಂಡು ಮುಂದಿನ ಬಾರಿಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನವನ್ನು ಘೋಷಿಸಿದರು. ಇನ್ನೋರ್ವ ಅತಿಥಿ ಎನ್. ಎಸ್. ಹೆಗಡೆಯವರು ಮಾತನಾಡಿ ಸ್ವಚ್ಛತೆ, ಶಾಂತಿ, ಪರಸ್ಪರರೊಂದಿಗೆ ಪ್ರೀತಿವಿಶ್ವಾಸ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿಕೊಂಡಲ್ಲಿ ನಮ್ಮ ಊರು, ಜಿಲ್ಲೆ, ರಾಜ್ಯ ಆ ಮೂಲಕ ಇಡೀ ದೇಶವೇ ಅಭಿವೃದ್ಧಿ ಸಾಧಿಸಲಿದೆ ಎಂದರು.
ನಂತರ ಟ್ರಸ್ಟ್ ವತಿಯಿಂದ ಮಖ್ಯಾಧ್ಯಾಪಕರಾದ ಮಹೇಶ್ವರಪ್ಪ, ವಿಷ್ಣು ಭಂಡಾರಕರ್, ಲಕ್ಷ್ಮೀ ಅಳಗೋಡ, ಇವರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಾದ ನಮೃತಾ ನಾಯ್ಕ, ರಶ್ಮಿ ಹಬ್ಬು ಅವರನ್ನು ಪುರಸ್ಕರಿಸಲಾಯಿತು. ಮಹೇಶ್ವರಪ್ಪ, ವಿಷ್ಣು ಭಂಡಾರಕರ್, ಲಕ್ಷ್ಮೀ ಅಳಗೋಡ, ಸತೀಶ ಭಟ್ ಅವರು ಮಾತನಾಡಿ ಸಂತಸ ವ್ಯಕ್ತಪಡಿಸಿದರು. ಶಿಕ್ಷಕಿ ದೀಪ್ತಿ ಹೆಗಡೆ ಸ್ವಾಗತಿಸಿದರು .ಶೀಲಾ ಮೇಸ್ತ ನಿರೂಪಿಸಿದರು. ಶಿಕ್ಷಕಿ ಅಂಜನಾ ನಾಯ್ಕ ವಂದಿಸಿದರು.

RELATED ARTICLES  ಯೋಗೇಶ್ ಗೌಡ ಕೊಲೆ ಪ್ರಕರಣ ; ವಿನಯ ಕುಲಕರ್ಣಿ ರಾಜೀನಾಮೆಗೆ ಬಿಜೆಪಿ ಆಗ್ರಹ